AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ದೇಗುಲದ ಮಹತ್ವ ಹಾಗೂ ಇತಿಹಾಸವೇನು ಗೊತ್ತಾ? ಇಲ್ಲಿದೆ ಮಾಹಿತಿ

ಹಾಸನಾಂಬೆ ದೇಗುಲದ ಮಹತ್ವ ಹಾಗೂ ಇತಿಹಾಸವೇನು ಗೊತ್ತಾ? ಇಲ್ಲಿದೆ ಮಾಹಿತಿ

Ganapathi Sharma
|

Updated on:Oct 09, 2025 | 6:59 AM

Share

Hasanamba Temple History, Significance and Unique Traditions: ಹಾಸನಾಂಬೆ ದೇಗುಲದ ವಾರ್ಷಿಕ ದರ್ಶನ ಇಂದಿನಿಂದ (ಅಕ್ಟೋಬರ್ 9) ಆರಂಭವಾಗುತ್ತಿದೆ. ಅಕ್ಟೋಬರ್ 9 ರಿಂದ 23 ರವರೆಗೆ ತೆರೆದಿರುವ ಈ ದೇವಾಲಯವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ನಮ್ಮ ಮನೆಯಲ್ಲೂ ದೇವಿಯನ್ನು ಸ್ಮರಿಸಿ ಪೂಜೆ ಸಲ್ಲಿಸುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಈ ದೇವಿಯ ಮಹತ್ವ, ಇತಿಹಾಸ ಮತ್ತು ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಿಂದಿನ ನಂಬಿಕೆಗಳನ್ನು ಇಲ್ಲಿ ತಿಳಿಯಿರಿ.

ಇಂದಿನಿಂದ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 9 ರಿಂದ 23 ರವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದು. ಇದು ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಅಪರೂಪದ ದೇವಾಲಯ. ಈ 14 ದಿನಗಳ ಕಾಲ ಭಕ್ತರಿಗೆ ದರ್ಶನದ ಭಾಗ್ಯ ಲಭಿಸುತ್ತದೆ. ಈ ದೇಗುಲದ ಧಾರ್ಮಿಕ ಮಹತ್ವ ಮತ್ತು ಇತಿಹಾಸದ ಬಗ್ಗೆ ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ‘ಟಿವಿ9’ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಬೆಳಕುಚೆಲ್ಲಿದ್ದಾರೆ.

ಹಾಸನಾಂಬೆ ಎಂಬ ಹೆಸರು ನಗುಮುಖದ ಅಂಬಾ ಅಂದರೆ ನಗುಮುಖದ ತಾಯಿ ಎಂಬುದರಿಂದ ಬಂದಿದೆ. ಹಾಸನ ನಗರಕ್ಕೆ ಈ ಹೆಸರಿನಿಂದಲೇ ‘ಹಾಸನ’ ಎಂದು ಬಂದಿದೆ ಎಂಬ ಇತಿಹಾಸವಿದೆ. ಇದು ಹಾಸನ ನಗರದ ಅಧಿದೇವತೆ ಎಂದು ಪ್ರಖ್ಯಾತವಾಗಿದೆ. ಈ ದೇವಾಲಯದ ಅತ್ಯಂತ ವಿಶಿಷ್ಟ ನಂಬಿಕೆಯೆಂದರೆ, ದೇಗುಲದ ಬಾಗಿಲು ಮುಚ್ಚಿದಾಗ ಹಚ್ಚಿದ ದೀಪವು ಮುಂದಿನ ವರ್ಷ ದೇಗುಲ ತೆರೆಯುವವರೆಗೂ ಆರದೆ ಉರಿಯುತ್ತದೆ. ಅಲ್ಲದೆ, ನೈವೇದ್ಯ ಕೆಡುವುದಿಲ್ಲ ಮತ್ತು ಅರ್ಪಿಸಿದ ಹೂಗಳು ಬಾಡುವುದಿಲ್ಲ ಎಂಬ ಪ್ರತೀತಿ ಈಗಲೂ ಇದೆ. ಈ ದೇವಾಲಯವನ್ನು 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಸಪ್ತಮಾತೃಕೆಯರಲ್ಲಿ ಮೂವರು ತಾಯಂದಿರು ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಅವರು ಭೂಮಿಗೆ ಬಂದಾಗ ಹಾಸನದ ಸೌಂದರ್ಯಕ್ಕೆ ಮಾರುಹೋಗಿ ಇಲ್ಲೇ ನೆಲೆಸಲು ನಿರ್ಧರಿಸಿದರಂತೆ. ಅವರಲ್ಲಿ ಮಹೇಶ್ವರಿ, ಕೌಮಾರಿ, ವೈಷ್ಣವಿ ಹಾಸನದಲ್ಲಿ ನೆಲೆಸಿದ್ದಾರೆ. ಬ್ರಾಹ್ಮೀ ಮತ್ತು ಇಂದ್ರಾಣಿ ಕೆಂಚಮ್ಮನ ಹೊಸಕೋಟೆಯಲ್ಲಿ, ವಾರಾಹಿ ಮತ್ತು ಚಾಮುಂಡಿ ದೇವಿ ಒಂದು ಬಾವಿಯಲ್ಲಿ ನೆಲೆಸಿದ್ದಾರೆ. ಹಾಸನಾಂಬೆ ಶಕ್ತಿ ಸ್ವರೂಪಿಣಿ ದೇವಿಯಾಗಿದ್ದು, ಸ್ತ್ರೀ ಶಕ್ತಿಯ ಸಂಕೇತವಾಗಿದ್ದಾಳೆ ಎಂದು ಗುರೂಜಿ ತಿಳಿಸಿದ್ದಾರೆ.

ಈ ಪರ್ವಕಾಲದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹರಕೆಗಳನ್ನು ಹೊತ್ತುಕೊಳ್ಳಲು ಮತ್ತು ತೀರಿಸಿಕೊಳ್ಳಲು ಇದು ಸುಸಮಯವಾಗಿದೆ. ಈ 14 ದಿನಗಳ ಕಾಲ ಭಕ್ತರು ಮನೆಯಲ್ಲೂ ದೇವಿಯನ್ನು ಸ್ಮರಿಸಬಹುದು. ಮನೆಯಲ್ಲಿ ಒಂದು ಅಕ್ಕಿಯ ಮೇಲೆ ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯ ದೀಪವನ್ನು ಪೂರ್ವಾಭಿಮುಖವಾಗಿ ಇಟ್ಟು, ಅದಕ್ಕೆ ಒಂದು ಚಿಟಿಕೆ ಕುಂಕುಮ ಹಾಕಿ, ಆ ತಾಯಿಯನ್ನು ಆವಾಹನೆ ಮಾಡಿ ಪ್ರಾರ್ಥಿಸಿದರೆ, ಸಂಕಲ್ಪಗಳು ಈಡೇರಿ ಬಹಳಷ್ಟು ಶುಭವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.

ವಿವಾಹಕ್ಕೆ ಸಮಸ್ಯೆ ಇರುವವರು, ಅನಾರೋಗ್ಯ ಪೀಡಿತರು, ಕಷ್ಟಗಳಿಂದ ಬಳಲುತ್ತಿರುವವರು, ಮೋಸ ಹೋಗಿರುವವರು ಸೇರಿದಂತೆ ಹಲವರು ಹಾಸನಾಂಬೆ ತಾಯಿಯ ಕೃಪೆಗೆ ಪಾತ್ರರಾಗಲು ಪ್ರಾರ್ಥಿಸುತ್ತಾರೆ. ಬಲಿಪಾಡ್ಯಮಿಯ ನಂತರ ಅಂದರೆ ಅಕ್ಟೋಬರ್ 23 ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.

Published on: Oct 09, 2025 06:53 AM