ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ

Updated on: Aug 31, 2026 | 1:23 PM

ಪ್ರಧಾನಿ ಮೋದಿ ಉಜ್ಬೇಕಿಸ್ತಾನ ಭೇಟಿ ವೇಳೆ ತಾಷ್ಕೆಂಟ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ, ಯೋಗ ಮತ್ತು ಸಾಹಿತ್ಯ ಕುರಿತು ಸಂವಾದ ನಡೆಸಿದರು. ಉಜ್ಬೇಕ್ ವಿದ್ಯಾರ್ಥಿಗಳು ಪ್ರಧಾನಿ ಕವನಗಳನ್ನು ವಾಚಿಸಿ ಮೆಚ್ಚುಗೆ ಗಳಿಸಿದರು. ತಿರುಕ್ಕುರಳ್ ಉಜ್ಬೇಕ್ ಭಾಷೆಗೆ ಅನುವಾದಿಸುವಂತೆ ಮೋದಿ ಕರೆ ನೀಡಿದರು. ಯೋಗ ತರಬೇತಿ ಮತ್ತು ಹಿಂದಿ ಬೋಧನೆಯು ಉಭಯ ದೇಶಗಳ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿವೆ.

ತಾಷ್ಕೆಂಟ್ , ಆಗಸ್ಟ್​ 31:  ಉಜ್ಬೇಕಿಸ್ತಾನ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯೆಂಟಲ್ ಸ್ಟಡೀಸ್‌ನಲ್ಲಿರುವ ‘ಮಹಾತ್ಮ ಗಾಂಧಿ ಕೇಂದ್ರ’ಕ್ಕೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಭಾರತಶಾಸ್ತ್ರಜ್ಞರೊಂದಿಗೆ ಭಾರತೀಯ ಸಂಸ್ಕೃತಿ, ಯೋಗ ಮತ್ತು ಸಾಹಿತ್ಯದ ಕುರಿತು ಅರ್ಥಪೂರ್ಣ ಸಂವಾದ ನಡೆಸಿದರು.

ಸಂವಾದದ ವೇಳೆ ಉಜ್ಬೇಕ್ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರು ರಚಿಸಿದ ಕವನಗಳನ್ನು ಹಿಂದಿ ಭಾಷೆಯಲ್ಲಿ ಸ್ಪಷ್ಟ ಉಚ್ಚಾರಣೆಯೊಂದಿಗೆ ವಾಚಿಸಿದ್ದು, ಪ್ರಧಾನಿಯವರ ಮೆಚ್ಚುಗೆಗೆ ಪಾತ್ರವಾಯಿತು. ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಗೆ ಅಪಾರ ಗೌರವವಿದೆ.

ಭಾರತದ ತಾತ್ವಿಕ ಹಿನ್ನೆಲೆ, ಕಲೆ ಮತ್ತು ಸಮಾಜವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಓದುವುದು ಅತ್ಯಗತ್ಯ ಎಂದು ಉಜ್ಬೇಕ್ ತಜ್ಞರು ಅಭಿಪ್ರಾಯಪಟ್ಟರು. ಪ್ರಾಚೀನ ತಮಿಳು ಸಾಹಿತ್ಯದ ಶ್ರೇಷ್ಠ ನೀತಿ ಗ್ರಂಥವಾದ ಸಂತ ತಿರುವಳ್ಳುವರ್ ರಚಿತ ‘ತಿರುಕ್ಕುರಳ್’ ಅನ್ನು ಉಜ್ಬೇಕ್ ಭಾಷೆಗೆ ಅನುವಾದಿಸುವಂತೆ ಪ್ರಧಾನಿ ಮೋದಿ ವಿಶ್ವವಿದ್ಯಾಲಯದ ವಿದ್ವಾಂಸರಿಗೆ ಕರೆ ನೀಡಿದರು.

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ತಮಿಳಿನ ಜ್ಞಾನ ಪರಂಪರೆಯು ಉಜ್ಬೇಕ್ ಜನತೆಗೆ ಭಾರತೀಯ ತತ್ವಶಾಸ್ತ್ರದ ಆಳವನ್ನು ಪರಿಚಯಿಸಲು ಸಹಕಾರಿಯಾಗಲಿದೆ ಎಂದರು. ಇದಕ್ಕೆ ವಿವಿಯ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಉಜ್ಬೇಕಿಸ್ತಾನದಲ್ಲಿ ಯೋಗ ತರಬೇತಿ ಹಾಗೂ ಪ್ರಮಾಣೀಕರಣ ಪರೀಕ್ಷೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಉಭಯ ದೇಶಗಳ ಜನರ ನಡುವಿನ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಇದು ಪ್ರಮುಖ ಸೇತುವೆಯಾಗಿದೆ.

ತಾಷ್ಕೆಂಟ್ ವಿಶ್ವವಿದ್ಯಾಲಯದಲ್ಲಿ 1947 ರಿಂದಲೂ ಹಿಂದಿ ಕಲಿಸಲಾಗುತ್ತಿದ್ದು, ಮಹಾತ್ಮ ಗಾಂಧಿಯವರ ಅಹಿಂಸಾ ತತ್ವಗಳು ಹಾಗೂ ಜೀವನ ಚರಿತ್ರೆಯ ಕುರಿತು ಅಲ್ಲಿನ ಸಂಶೋಧಕರು ವ್ಯಾಪಕ ಅಧ್ಯಯನ ನಡೆಸುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದರು.

 

ವಿಡಿಯೋ ಡುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us