ನಾಳೆ ಮೈಸೂರಿನಲ್ಲಿ ಪಿಎಂ ಮೋದಿ ಉದ್ಘಾಟಿಸಲಿರುವ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ಹೇಗಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ವಿಶ್ವದ ಮೊದಲ ಅತ್ಯಾಧುನಿಕ ಟಿಲ್ಟೆಡ್ ಎಲ್ಇಡಿ ಡೋಮ್ ಕಾಸ್ಮೋಸ್ ತಾರಾಲಯವನ್ನು ಉದ್ಘಾಟಿಸಿದ್ದಾರೆ. 18 ಮೀಟರ್ ವ್ಯಾಸದ ಗುಮ್ಮಟದಲ್ಲಿ 160 ಮಂದಿಗೆ ಒಂದೇ ಬಾರಿಗೆ ಬಾಹ್ಯಾಕಾಶದ ಅನುಭವ ನೀಡುವ ಇದು, ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧಕರ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಮೈಸೂರು, ನವೆಂಬರ್ 11: ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಮೈಸೂರು ಇನ್ನು ಮುಂದೆ ವೈಜ್ಞಾನಿಕ ಸ್ವರ್ಗವಾಗಿಯೂ ಗುರುತಿಸಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯುನ್ನತ ದರ್ಜೆಯ ಕಾಸ್ಮೋಸ್ ತಾರಾಲಯವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದು ವಿಶ್ವದ ಮೊದಲ ಸಾಲಿನ ಅತ್ಯಾಧುನಿಕ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯಗಳಲ್ಲಿ ಒಂದಾಗಿದೆ.
ಈ ತಾರಾಲಯವು 18 ಮೀಟರ್ ವ್ಯಾಸದ ಟಿಲ್ಟೆಡ್ ಎಲ್ಇಡಿ ಡೋಮ್ ಅನ್ನು ಹೊಂದಿದ್ದು, ಏಕಕಾಲಕ್ಕೆ 160 ಮಂದಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. 4.27 ಕೋಟಿ ಪಿಕ್ಸೆಲ್‌ಗಳ ಅತ್ಯಾಧುನಿಕ ತಂತ್ರಜ್ಞಾನ ಹಾಗೂ 353.4 ಚದರ ಮೀಟರ್ ವಿಸ್ತೀರ್ಣದ ಬೃಹತ್ ಪ್ರದರ್ಶನ ಪರದೆಯನ್ನು ಇದು ಒಳಗೊಂಡಿದೆ. 6,148 ಎಲ್ಇಡಿ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದ್ದು, ಸ್ಕೈ ಎಕ್ಸ್‌ಪ್ಲೋರ್ ಸಾಫ್ಟ್‌ವೇರ್ ಮೂಲಕ ವಿಶ್ವದ ವಿಸ್ಮಯಗಳನ್ನು ಪ್ರದರ್ಶಿಸಲಾಗುತ್ತದೆ. ಅವರ್ ಹೋಮ್, ಅವರ್ ಕಾಸ್ಮೋಸ್ ಹೆಸರಿನ 12 ನಿಮಿಷಗಳ ಪ್ರದರ್ಶನವನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಸಾಂಸ್ಕೃತಿಕ ನಗರಿಗೆ ಇದೊಂದು ಹೊಸ ಗರಿಯಾಗಿದ್ದು, ಮೈಸೂರನ್ನು ವಿಜ್ಞಾನ ಭೂಪಟದಲ್ಲಿ ಗುರುತಿಸುವಂತೆ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
