ಗೃಹ ಸಚಿವರ ಜಿಲ್ಲೆಯಲ್ಲಿ ಪಿಎಸ್ಐ ಸಮ್ಮುಖ ಪೊಲೀಸರಿಂದ ವ್ಯಕ್ತಿಯ ಮೇಲೆ ಅಮಾನವೀಯ ಹಲ್ಲೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 05, 2022 | 6:34 PM

ಅವನು ಆಪರಾಧಿಯಾಗಿದ್ದರೂ ಹೀಗೆ ಸಾರ್ವಜನಿಕವಾಗಿ ಥಳಿಸುವುದು, ಅವನಿಗೆ ಹಗ್ಗ ಬಿಗಿದು ಎಳೆದೊಯ್ಯುವುದನ್ನು ನೋಡುತ್ತಿದ್ದರೆ ನಾವು ಭಾರತದಲ್ಲಿದ್ದೀವಾ ಎಂಬ ಸಂಶಯ ಮೂಡುತ್ತದೆ. ಪೊಲೀಸರು ಅವನನ್ನು ನೆಲಕ್ಕೆ ಬೀಳಿಸಿ ಕುತ್ತಿಗೆ ಹಿಡಿದಿರುವುದನ್ನು ಗಮನಿಸಿ. ಭಯವಾಗುತ್ತದೆ.

ಶಿವಮೊಗ್ಗ ಜಿಲ್ಲೆ ಅನಪೇಕ್ಷಿತ ಸುದ್ದಿಗಳಿಗೆ ಕಾರಣವಾಗುತ್ತಿದೆ. ಇತ್ತೀಚಿಗೆ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ (Harsha murder) ನಡೆದು ಶಿವಮೊಗ್ಗ ನಗರ (Shivamogga city) ಎರಡು ವಾರಗಳ ಕಾಲ ಸುದ್ದಿಯಲ್ಲಿತ್ತು. ಕೊಲೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸಿದವು. ನಗರದಲ್ಲಿ ಕರ್ಫ್ಯೂ, ನಿಷೇಧಾಜ್ಞೆಗಳನ್ನು ಹೇರಲಾಗಿತ್ತು ಮತ್ತು ಶಾಲಾ ಕಾಲೇಜುಗಳು ಒಂದು ವಾರದವರೆಗೆ ಮುಚ್ಚಲ್ಪಟ್ಟಿದ್ದವು. ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಂಡ ಬಳಿಕ ಕೆಲವು ಕಡೆ ಪುನಃ ಹಿಜಾಬ್ ವಿವಾದ ತಲೆದೋರಿತು. ಈಗ ಶಿವಮೊಗ್ಗ ನಗರ ಮತ್ತು ಜಿಲ್ಲೆ ಶಾಂತವಾಗಿವೆ, ಆ ಪ್ರಶ್ನೆ ಬೇರೆ.

ಆದರೆ ಶನಿವಾರ ಮನಸ್ಸಿಗೆ ಕಿರಿಕಿರಿ ಮಾಡುವ ವಿಡಿಯೊವೊಂದು ನಮಗೆ ಸಿಕ್ಕಿದೆ. ನಿಜಕ್ಕೂ ಡಿಸ್ಟರ್ಬಿಂಗ್ ವಿಡಿಯೋ ಇದು. ನೋಡಿದಾಗ ನಿಮಗೂ ಹಾಗೆಯೇ ಅನಿಸುತ್ತದೆ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ವಿಡಿಯೋ ಇದು. ದೌರ್ಜನ್ಯಕ್ಕೊಳಗಾಗಿರುವ ವ್ಯಕ್ತಿ ಯಾವ ತಪ್ಪು ಮಾಡಿದ್ದಾನೆ ಅಂತ ನಮಗೆ ಗೊತ್ತಿಲ್ಲ.

ಅವನು ಆಪರಾಧಿಯಾಗಿದ್ದರೂ ಹೀಗೆ ಸಾರ್ವಜನಿಕವಾಗಿ ಥಳಿಸುವುದು, ಅವನಿಗೆ ಹಗ್ಗ ಬಿಗಿದು ಎಳೆದೊಯ್ಯುವುದನ್ನು ನೋಡುತ್ತಿದ್ದರೆ ನಾವು ಭಾರತದಲ್ಲಿದ್ದೀವಾ ಎಂಬ ಸಂಶಯ ಮೂಡುತ್ತದೆ. ಪೊಲೀಸರು ಅವನನ್ನು ನೆಲಕ್ಕೆ ಬೀಳಿಸಿ ಕುತ್ತಿಗೆ ಹಿಡಿದಿರುವುದನ್ನು ಗಮನಿಸಿ. ಭಯವಾಗುತ್ತದೆ. ಅವನು ಸಣ್ಣ ಫ್ರೇಮಿನ ನಿಶ್ಶಕ್ತ ವ್ಯಕ್ತಿಯಾಗಿದ್ದಾನೆ. ಪೊಲೀಸರ ಅಮಾನವೀಯ ಹಲ್ಲೆಯಲ್ಲಿ ಅವನು ಉಸಿರು ನಿಲ್ಲಿಸಿದರೂ ಆಶ್ಚರ್ಯವಿಲ್ಲ.

ಅವನು ಯಾವುದೇ ತಪ್ಪು ಮಾಡಿದ್ದರೂ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಹೊಸನಗರದ ಇನ್ಸ್ಪೆಕ್ಟರ್ ರಾಜೇಂದ್ರ ಎ ನಾಯ್ಕ್ ಅವರ ಸಮ್ಮುಖದಲ್ಲಿ ಇದೆಲ್ಲ ನಡೆಯುತ್ತಿದೆ. ಶಿವಮೊಗ್ಗ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆ.

ಇದನ್ನೂ ನೋಡಿ :   ಉಕ್ರೇನ್​​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎನ್​ಎಂಸಿಯಿಂದ ಗುಡ್​ನ್ಯೂಸ್​; ಇಂಟರ್ನ್​ಶಿಪ್​ ಮಾಡಲು ಅವಕಾಶ