ಉಕ್ರೇನ್​​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎನ್​ಎಂಸಿಯಿಂದ ಗುಡ್​ನ್ಯೂಸ್​; ಇಂಟರ್ನ್​ಶಿಪ್​ ಮಾಡಲು ಅವಕಾಶ

ಉಕ್ರೇನ್​​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎನ್​ಎಂಸಿಯಿಂದ ಗುಡ್​ನ್ಯೂಸ್​; ಇಂಟರ್ನ್​ಶಿಪ್​ ಮಾಡಲು ಅವಕಾಶ
ಉಕ್ರೇನ್​​ನಿಂದ ಬಂದ ವಿದ್ಯಾರ್ಥಿಗಳು

ಇಂಟರ್ನ್​ಶಿಪ್​ಗೆ ಭಾರತದಲ್ಲಿ ನೋಂದಣಿ ಬಯಸುವ ವಿದ್ಯಾರ್ಥಿಗಳು ನ್ಯಾಶನಲ್​ ಬೋರ್ಡ್​ ಆಫ್​ ಎಕ್ಸಾಮಿನೇಶನ್​​ ನಡೆಸುವ ವಿದೇಶಿ ಮೆಡಿಕಲ್​ ಗ್ರಾಜ್ಯುಯೇಟ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾ ಎಂಬುದನ್ನು ರಾಜ್ಯ ಮೆಡಿಕಲ್​ ಕೌನ್ಸಿಲ್​ಗಳು ಖಚಿತಪಡಿಸಿಕೊಳ್ಳಬೇಕು.

TV9kannada Web Team

| Edited By: Lakshmi Hegde

Mar 05, 2022 | 3:57 PM

ಉಕ್ರೇನ್​​ನಿಂದ ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಇದೀಗ ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಇಂಟರ್ನ್​ಶಿಪ್​ ಮಾಡಲು ರಾಷ್ಟ್ರೀಯ ವೈದ್ಯಕೀಯ ಕಮಿಷನ್​ (ರಾಷ್ಟ್ರೀಯ ವೈದ್ಯಕೀಯ ಆಯೋಗ-NMC) ಅವಕಾಶ ನೀಡಿದೆ. ವೈದ್ಯಕೀಯ ಪದವೀಧರ ವಿದ್ಯಾರ್ಥಿ 12 ತಿಂಗಳು ಇಂಟರ್ನ್​ಶಿಪ್​ ಮಾಡುವುದು ಕಡ್ಡಾಯವಾಗಿರುತ್ತದೆ. ಈಗ ಭಾರತಕ್ಕೆ ಬಂದಿರುವ ವಿದೇಶಿ ವೈದ್ಯಕೀಯ ಪದವೀಧರರು ಇಲ್ಲಿಯೇ ಆ ಇಂಟರ್ನ್​ಶಿಪ್​ ಮಾಡಬಹುದು ಎಂದು ಎನ್​ಎಂಸಿ ತನ್ನ ವೆಬ್​ಸೈಟ್​ http://nmc.org.in. ಯಲ್ಲಿ ಸುತ್ತೋಲೆ ಹೊರಡಿಸಿದೆ. ಉಕ್ರೇನ್​​ನಿಂದ ಭಾರತಕ್ಕೆ ಬಂದ ವಿದೇಶಿ ವೈದ್ಯಕೀಯ ಪದವೀಧರರಲ್ಲಿ ಹಲವರಿಗೆ ಅವರ ಇಂಟರ್ನ್​ಶಿಪ್​ ಪೂರ್ಣಗೊಂಡಿಲ್ಲ. ಕೊವಿಡ್​ 19 ಪರಿಸ್ಥಿತಿ, ಯುದ್ಧಗಳಂಥ ಕಾರಣದಿಂದ ಅವರಿಗೆ ಇಂಟರ್ನ್​ಶಿಪ್​ ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ಅವರು ತುಂಬ ಒತ್ತಡ ಮತ್ತು ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಅವರು ತಮ್ಮ ಇಂಟರ್ನ್​ಶಿಪ್​ ಪೂರ್ತಿ ಮುಗಿಸಲು ಭಾರತದಲ್ಲಿ ಅವಕಾಶ ನೀಡಲಾಗುವುದು. ಅವರ ಅರ್ಜಿಯನ್ನು ಅರ್ಹ ಎಂದು ಪರಿಗಣಿಸಲಾಗುವುದು ಎಂದು ಎನ್​ಎಂಸಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಹೀಗೆ ಇಂಟರ್ನ್​ಶಿಪ್​ಗೆ ಭಾರತದಲ್ಲಿ ನೋಂದಣಿ ಬಯಸುವ ವಿದ್ಯಾರ್ಥಿಗಳು ನ್ಯಾಶನಲ್​ ಬೋರ್ಡ್​ ಆಫ್​ ಎಕ್ಸಾಮಿನೇಶನ್​​ ನಡೆಸುವ ವಿದೇಶಿ ಮೆಡಿಕಲ್​ ಗ್ರಾಜ್ಯುಯೇಟ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾ ಎಂಬುದನ್ನು ರಾಜ್ಯ ಮೆಡಿಕಲ್​ ಕೌನ್ಸಿಲ್​ಗಳು ಖಚಿತಪಡಿಸಿಕೊಳ್ಳಬೇಕು. ನೋಂದಣಿಗೆ ಇರುವ ಮಾನದಂಡಗಳನ್ನು ಪೂರೈಸಿರುವ ಅಭ್ಯರ್ಥಿಗೆ 12 ತಿಂಗಳ ಅಥವಾ ಅವರಿಗೆ ಬಾಕಿ ಇರುವ ಅವಧಿಯ ಇಂಟರ್ನ್​ಶಿಪ್​ಗೆ ಅವಕಾಶ ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲ, ಈ ವಿದ್ಯಾರ್ಥಿಗಳು ಇಂಟರ್ನ್​ಶಿಪ್​ ಪಡೆಯುವ ಕಾಲೇಜು ಇವರಿಂದ ಯಾವುದೇ ಶುಲ್ಕ ಪಡೆದಿಲ್ಲ/ಪಡೆಯುವುದಿಲ್ಲ ಎಂಬುದಕ್ಕೆ ರಾಜ್ಯ ಮೆಡಿಕಲ್ ಕೌನ್ಸಿಲ್​ಗಳು ಆ ಕಾಲೇಜುಗಳಿಂದ ಭರವಸೆ ಪಡೆಯಬೇಕು. ಈ ವಿದೇಶಿ ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳಿಗೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ವೈದ್ಯಕೀಯ ಪದವೀಧರರಿಗೆ ನೀಡಲಾಗುತ್ತಿರುವಷ್ಟೇ ಸ್ಟೈಫಂಡ್​ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು ಎಂದೂ ಎನ್​ಎಂಸಿ ಹೇಳಿದೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿಯೇ ಪ್ರವೇಶ ಕಲ್ಪಿಸಬೇಕು ಎಂದು ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಸದ್ಯದ ಮಟ್ಟಿಗಂತೂ ಉಕ್ರೇನ್​ ಪರಿಸ್ಥಿತಿ ಸರಿಯಾಗಲಿದೆ ಎಂಬುದು ಅನುಮಾನ. ಇದೀಗ ಬಂದಿರುವ ವಿದ್ಯಾರ್ಥಿಗಳು ಮತ್ತೆ ಅಲ್ಲಿ ಹೋಗಿ ಶಿಕ್ಷಣ ಮುಂದುವರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ. ಹೀಗಾಗಿ ವಿದ್ಯಾರ್ಥಿಗಳಿಗೆ ಇಲ್ಲಿಯೇ ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆ ಕೇಳಿಬಂದಿತ್ತು.

ಇದನ್ನೂ ಓದಿ: ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕೊಡಿ: ಐಎಂಎ ಸಲಹೆ

Follow us on

Related Stories

Most Read Stories

Click on your DTH Provider to Add TV9 Kannada