ಗುಕೇಶ್ ಬಳಿಕ ಪ್ರಗ್ನಾನಂದ ವಿರುದ್ಧವೂ ಸೋತ ಮ್ಯಾಗ್ನಸ್ ಕಾರ್ಲ್ಸನ್; ವಿಡಿಯೋ ನೋಡಿ

Updated on: Jul 17, 2025 | 3:31 PM

Freestyle Chess Event: ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಭಾರತದ ಯುವ ಪ್ರತಿಭೆ ಆರ್. ಪ್ರಗ್ನಾನಂದ ಅವರು ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದಾರೆ. ಇದು ಪ್ರಗ್ನಾನಂದರ ವೃತ್ತಿಜೀವನದ ಅತ್ಯಂತ ಮಹತ್ವದ ಗೆಲುವುಗಳಲ್ಲಿ ಒಂದಾಗಿದೆ. ಈ ಗೆಲುವಿನೊಂದಿಗೆ ಅವರು ಟೂರ್ನಮೆಂಟ್‌ನಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದು, ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಕೆಲವೇ ದಿನಗಳ ಹಿಂದೆ ಭಾರತದ ಯುವ ಚೆಸ್ ಚತುರ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಡಿ ಗುಕೇಶ್ ವಿರುದ್ಧ ಸೋತಿದ್ದ ನಾರ್ವೆಯ ಗ್ರ್ಯಾಂಡ್‌ಮಾಸ್ಟರ್ ಮತ್ತು ವಿಶ್ವದ ನಂಬರ್-1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್​ ಇದೀಗ ಮತ್ತೊಬ್ಬ ಭಾರತೀಯನೆದುರು ಮಂಡಿಯೂರಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಭಾರತದ ಯುವ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ನಾಲ್ಕನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್​ಗೆ ಎಂಟ್ರಿಕೊಟ್ಟಿದ್ದಾರೆ.

ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಗ್ನಾನಂದ ಕೇವಲ 39 ನಡೆಗಳಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧದ ಗೆಲುವಿನೊಂದಿಗೆ, ಆರ್ ಪ್ರಗ್ನಾನಂದ ಅವರು ಎಂಟು ಆಟಗಾರರ ವೈಟ್ ಗ್ರೂಪ್‌ನಲ್ಲಿ 4.5 ಅಂಕಗಳೊಂದಿಗೆ ಜಂಟಿಯಾಗಿ ಅಗ್ರ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಜ್ಬೇಕಿಸ್ತಾನದ ನೋಡಿರ್ಬೆಕ್ ಅಬ್ದುಸತ್ತೊರೊವ್ ವಿರುದ್ಧ ಡ್ರಾ ಆಡುವ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸಿದ ಪ್ರಗ್ನಾನಂದ, ಎರಡನೇ ಸುತ್ತಿನಲ್ಲಿ ಕಝಾಕಿಸ್ತಾನದ ಅಸ್ಸೌಬಯೇವಾ ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಮೂರನೇ ಸುತ್ತಿನಲ್ಲಿ ಜರ್ಮನಿಯ ವಿನ್ಸಂಟ್ ಕೀಮರ್ ವಿರುದ್ಧ ಗೆಲುವು ಸಾಧಿಸಿದ್ದ ಪ್ರಗ್ನಾನಂದ ಇದೀಗ ನಾಲ್ಕನೇ ಸುತ್ತಿನಲ್ಲಿ ವಿಶ್ವದ ನಂಬರ್-1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ