ಕುರ್ ಕುರೇ ಪ್ಯಾಕೇಟ್ಗಳಲ್ಲಿ 500 ರೂ ಗರಿ ಗರಿ ನೋಟುಗಳು, ಖರೀದಿಗೆ ಮುಗಿಬಿದ್ದ ಜನ
ವಿವಿಧ ಕಂಪನಿಗಳ 5 ರೂ. 2ರೂ.ನ ಕುರ್ ಕುರೆ ಪ್ಯಾಕೆಟ್ನಲ್ಲಿ 500 ಮುಖಬೆಲೆಯ ನೋಟ್ಗಳು ಪತ್ತೆಯಾಗುತ್ತಿದ್ದು ಜನ ಕುರ್ ಕುರೆ ಖರೀದಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ರಾಯಚೂರು: ಮಕ್ಕಳು ಇಷ್ಟ ಪಟ್ಟು ತಿನ್ನುವ ಕುರ್ ಕುರೇಗಳನ್ನು(Kurkure) ಕೊಡಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ಕುರ್ ಕುರೇ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಮಕ್ಕಳಿಗೆ ಬುದ್ದಿ ಹೇಳಿ ಅದನ್ನು ಆದಷ್ಟು ಅವೈಡ್ ಮಾಡಲು ಹೇಳ್ತಾರೆ. ಆದ್ರೆ ರಾಯಚೂರಿನಲ್ಲಿ ಕುರ್ ಕುರೇ ಪ್ಯಾಕೇಟ್ ಕಮಾಲ್ ಮಾಡಿದೆ. ಮಕ್ಕಳಲ್ಲದೆ ಪೋಷಕರು ಕೂಡ ಕುರ್ ಕುರೇ ಖರೀದಿಸಲು ಮುಗಿಬಿದ್ದಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಮಕ್ಕಳ ಕುರ್ ಕುರೆ ಪ್ಯಾಕೆಟ್ನಲ್ಲಿ 500 ರೂಪಾಯಿ ನೋಟ್ಗಳು ಪತ್ತೆಯಾಗಿವೆ. ವಿವಿಧ ಕಂಪನಿಗಳ 5 ರೂ. 2ರೂ.ನ ಕುರ್ ಕುರೆ ಪ್ಯಾಕೆಟ್ನಲ್ಲಿ 500 ಮುಖಬೆಲೆಯ ನೋಟ್ಗಳು ಪತ್ತೆಯಾಗುತ್ತಿದ್ದು ಜನ ಕುರ್ ಕುರೆ ಖರೀದಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಒಂದೊಂದು ಪ್ಯಾಕೆಟ್ನಲ್ಲಿ 5-6 ನೋಟ್ಗಳು ಪತ್ತೆಯಾಗಿವೆ. ಕೆಲವೊಂದರಲ್ಲಿ ಎರಡು ಮೂರು ನೋಟುಗಳು ಸಿಕ್ಕಿವೆ. ಹೀಗೆ ವಿವಿಧ ಪ್ಯಾಕೆಟ್ಗಳಲ್ಲಿ ಸುಮಾರು 20 ಸಾವಿರದಷ್ಟು ಹಣ ಪತ್ತೆಯಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಹೂನೂರು ಗ್ರಾಮದಲ್ಲಿನ ಕೆಲ ಅಂಗಡಿಗಳಲ್ಲಿ ಖರೀದಿಸಿದ ಕುರ್ ಕುರ್ ಪ್ಯಾಕೇಟ್ ನಲ್ಲಿ ಹಣ ಪತ್ತೆಯಾಗುತ್ತಿದೆ. ಆದ್ರೆ ನಿನ್ನೆ ಸ್ಟಾಕ್ ಖಾಲಿಯಾದ ಹಿನ್ನೆಲೆ ಹೊಸ ಸ್ಟಾಕ್ ತರಿಸಿದ್ದು ಅವುಗಳಲ್ಲಿ ನೋಟುಗಳು ಸಿಗುತ್ತಿಲ್ಲ. ಇತ್ತೀಚೆಗೆ ಕುರ್ ಕುರೆ ಖರೀದಿಸಿದ ಮಂದಿ ನಿರಾಸೆಯಾಗಿದ್ದಾರೆ. ಆದ್ರೆ ನಾಲ್ಕೈದು ದಿನದಿಂದ ಪತ್ತೆಯಾದ ನೋಟುಗಳು ಅಸಲಿಗೆ ಖೋಟಾ ನೋಟಾ, ಇಲ್ಲಾ ಅಸಲಿ ನೋಟಾ ಅನ್ನೋದೇ ಗೊಂದಲವಾಗಿದೆ.