ತೀವ್ರ ಬರದಿಂದ ತತ್ತರಿಸಿದ್ದ ರೈತರಿಗೆ ವರುಣ ಕೃಪೆ: ಬೆಂಗಳೂರು ದಕ್ಷಿಣದಲ್ಲಿ ಕೆರೆಗಳೆಲ್ಲ ಭರ್ತಿ
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿತ್ತು. ರೈತರು ಬಿತ್ತಿದ ಬೆಳೆ ಉಳಿಸಿಕೊಳ್ಳಲು ಹನಿ ನೀರಿಗೂ ಹಾಹಾಕಾರ ಎದುರಿಸಿದ್ದರು. ಆದರೆ, ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿವೆ. ಬರಪೀಡಿತ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ, ಅಂತರ್ಜಲ ವೃದ್ಧಿಸಿ ಉತ್ತಮ ಫಸಲಿನ ನಿರೀಕ್ಷೆ ಹೆಚ್ಚಿದೆ.
ರಾಮನಗರ, ಅಕ್ಟೋಬರ್ 28: ಬೆಂಗಳೂರು ದಕ್ಷಿಣ ಜಿಲ್ಲೆಯು ತೀವ್ರ ಬರಗಾಲಕ್ಕೆ ತುತ್ತಾಗಿ ಸಂಕಷ್ಟಕ್ಕೀಡಾದ ಸಂದರ್ಭದಲ್ಲೇ ಎಡೆಬಿಡದೆ ಕೆಲವು ದಿನ ಸುರಿದ ಮಳೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಸರ್ಕಾರ ಕೂಡ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು, ಅದರಲ್ಲಿ ರಾಮನಗರ ತಾಲೂಕು ಕೂಡ ಒಂದು. ಮಳೆ ಇಲ್ಲದೆ ರೈತರು ತಾವು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಹನಿ ನೀರಿಗೂ ಹಾಹಾಕಾರ ಎದುರಿಸುವಂತಾಗಿತ್ತು. ಪ್ರಮುಖವಾಗಿ ರಾಗಿ ಬೆಳೆಯ ಸಂರಕ್ಷಣೆ ರೈತರಿಗೆ ದೊಡ್ಡ ಆತಂಕವಾಗಿ ಪರಿಣಮಿಸಿತ್ತು. ಬಹುತೇಕ ಕೆರೆಗಳು ಬತ್ತಿ ಹೋಗಿ ಪ್ರಾಣಿ ಪಕ್ಷಿಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯು ರೈತರ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ರಾಮನಗರ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಬಹುತೇಕ ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಕೆಲವು ಕೆರೆಗಳು ತುಂಬುವ ಹಂತದಲ್ಲಿವೆ.
ಕೆರೆಕಟ್ಟೆಗಳು ತುಂಬಿದ್ದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಲಿದ್ದು, ಇದು ರೈತರಿಗೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಬರಗಾಲದ ಆತಂಕ ದೂರವಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
