ಅಪ್ರಾಪ್ತ ಯುವಕನನ್ನು ಮದುವೆಯಾದ 19 ವರ್ಷದ ಯುವತಿ; ಎಫ್‌ಐಆರ್ ದಾಖಲು
ಭಾರತದ ಕಾನೂನಿನ ಪ್ರಕಾರ ಮದುವೆಯಾಗಲು ಹುಡುಗಿಯ ವಯಸ್ಸು 18 ಹಾಗೂ ಹುಡುಗನ ವಯಸ್ಸು 21 ವರ್ಷ ಆಗಿರಬೇಕು ಎಂಬ ನಿಯಮವಿದೆ. ಆದರೆ ಇಲ್ಲೊಬ್ಬಳು 19 ವರ್ಷ ವಯಸ್ಸಿನ ಯುವತಿ ಕಾನೂನನ್ನು ಮೀರಿ 19 ವರ್ಷ ವಯಸ್ಸಿನ ಯುವಕನನ್ನು ಮದುವೆಯಾಗಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಸೌಮ್ಯ ಹಾಗೂ ವಸಂತ್ ಮನೆಯವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಅಪ್ರಾಪ್ತ ಯುವಕನನ್ನು ಮದುವೆಯಾದ ಕಾರಣಕ್ಕೆ ಆ ಯುವತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಮನಗರ, ಸೆಪ್ಟೆಂಬರ್ 21: ಹಿಂದೂ ವಿವಾಹ ಕಾಯ್ದೆ 1955 (Hindu Marriage Act, 1955) ಮತ್ತು ವಿಶೇಷ ವಿವಾಹ ಕಾಯ್ದೆ 1954 ರ ಪ್ರಕಾರ ಮದುವೆಯಾಗಲು ಹುಡುಗಿಗೆ 18 ವರ್ಷ ಹಾಗೂ ಹುಡುಗನಿಗೆ 21 ವರ್ಷ ಆಗಿರಬೇಕು ಎಂಬ ನಿಯಮವಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಈ ನಿಯಮವನ್ನೆಲ್ಲಾ ಮೀರಿ ಯುವತಿಯೊಬ್ಬಳು ಅಪ್ರಾಪ್ತ ಯುವಕನನ್ನು ಮದುವೆಯಾಗಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ 19 ವರ್ಷದ ಸೌಮ್ಯ ಹಾಗೂ 19 ವರ್ಷದ ವಸಂತ್ ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನಲ್ಲಿ ಈ ಘಟನೆ ನಡೆದಿದ್ದು, ಜುಲೈ 11 ರಂದು ಈ ಜೋಡಿ ಮಾಗಡಿಯ ದೇಗುಲದಲ್ಲಿ ಮದುವೆಯಾಗಿದ್ದರು. ಆದರೆ ಇದೀಗ ನಿಮಯ ಮೀರಿ ಆ ಯುವತಿ ಅಪ್ರಾಪ್ತ ಯುವಕನನ್ನು ಮದುವೆಯಾದ ಕಾರಣಕ್ಕೆ ಆಕೆಯ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
