‘ಮೋದಿ ನಿರ್ಧರಿಸಿದರೆ ಪಾಕ್ ಕ್ರಿಕೆಟ್ ದಿವಾಳಿ ಆಗುತ್ತೆ’; ಮಾಜಿ ನಾಯಕ ರಮೀಜ್ ರಾಜಾ
Ramiz Raja viral video: ಪಾಕಿಸ್ತಾನದ ಟಿ20 ವಿಶ್ವಕಪ್ ನಿರ್ಧಾರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಐಸಿಸಿ ಆದಾಯದ ಬಹುಪಾಲು ಭಾರತದಿಂದ ಬರುವುದರಿಂದ, ಭಾರತದ ಪ್ರಭಾವ ಪಾಕ್ ಕ್ರಿಕೆಟ್ ಮೇಲೆ ಅಗಾಧವಾಗಿದೆ. ರಮೀಜ್ ರಾಜಾ ಅವರ ವೈರಲ್ ವಿಡಿಯೋ ಈ ಸತ್ಯವನ್ನು ಬಯಲು ಮಾಡಿದ್ದು, ಭಾರತದ ಆರ್ಥಿಕ ನಿರ್ಧಾರಗಳು ಪಾಕ್ ಕ್ರಿಕೆಟ್ ಮಂಡಳಿಗೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ. ಪಾಕಿಸ್ತಾನ ತನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕಿದೆ ಎಂದಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಟಿ20 ವಿಶ್ವಕಪ್ ಪಂದ್ಯವನ್ನಾಡುವುದಿಲ್ಲ ಎಂದಿರುವ ಪಾಕಿಸ್ತಾನಕ್ಕೆ ಮುಂದೆ ಎದುರಾಗಲಿರುವ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದೆನಿಸುತ್ತದೆ. ಏಕೆಂದರೆ ಈಗಾಗಲೇ ನೂರಾರು ಸಮಸ್ಯೆಗಳಿಂದ ಬಳಲುತ್ತಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಐಸಿಸಿ ಈವೆಂಟ್ನಿಂದ ಬರುತ್ತಿದ್ದ ನೂರಾರು ಕೋಟಿ ರೂಗಳ ಆದಾಯವನ್ನು ಕಳೆದುಕೊಂಡಿದೆ. ಇದರ ಜೊತೆಗೆ ಐಸಿಸಿಯ ಕೋಪಕ್ಕೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಕ್ಕೊಳಗಾಗುವುದಂತೂ ಖಚಿತ. ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ನಾಯಕ ಮತ್ತು ಮಾಜಿ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಹೇಗೆ ಹಾಳಾಗಬಹುದು ಎಂಬುದನ್ನು ವಿವರಿಸಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಮೀಜ್ ರಾಜಾ, ‘ಪಾಕಿಸ್ತಾನ ಮಂಡಳಿಯು ಐಸಿಸಿಯಿಂದ 50% ಹಣವನ್ನು ಪಡೆಯುತ್ತದೆ. ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ ಮತ್ತು ಅದರಿಂದ ಬರುವ ಲಾಭವನ್ನು ಸದಸ್ಯ ರಾಷ್ಟ್ರಗಳಿಗೆ ಹಂಚುತ್ತದೆ. ಆದರೆ ಬರುವ ಆದಾಯದಲ್ಲಿ ಶೇ. 90 ರಷ್ಟು ಹಣ ಭಾರತೀಯ ಕ್ರಿಕೆಟ್ ಮಾರುಕಟ್ಟೆಯಿಂದ ಬರುತ್ತದೆ. ಒಂದು ರೀತಿಯಲ್ಲಿ, ಭಾರತೀಯ ವ್ಯಾಪಾರ ಸಂಸ್ಥೆಗಳು ಪಾಕಿಸ್ತಾನ ಕ್ರಿಕೆಟ್ ಅನ್ನು ನಡೆಸುತ್ತಿವೆ. ನಾಳೆ ಭಾರತದ ಪ್ರಧಾನಿ ಪಾಕಿಸ್ತಾನಕ್ಕೆ ನಾವು ಹಣಕಾಸು ನೀಡುವುದಿಲ್ಲ ಎಂದು ನಿರ್ಧರಿಸಿದರೆ, ನಮ್ಮ ಕ್ರಿಕೆಟ್ ಮಂಡಳಿ ದಿವಾಳಿಯಾಗುತ್ತದೆ. ಹೀಗಾಗಿ ನಾವು ಬೇರೆಯವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ನಾವು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕಾಗುತ್ತದೆ. ಬಿಸಿಸಿಐ ಮೇಲಿನ ಅವಲಂಬನೆಯನ್ನು ಪ್ರತಿ ವರ್ಷ ಶೇ. 10 ರಷ್ಟು ಕಡಿಮೆ ಮಾಡಬೇಕು’ ಎಂದಿದ್ದಾರೆ.