ಹೊನ್ನಾಳಿಯ ಕೆಂಗನಳ್ಳಿಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ತಡೆಯಲು ಶಾಸಕ ಎಮ್ ಪಿ ರೇಣುಕಾಚಾರ್ಯ ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಗ್ರಾಮಸ್ಥರ ಪ್ರಶ್ನೆ

Arun Belly

Arun Belly |

Updated on: Jan 21, 2023 | 8:02 AM

ಕೆಂಗನಳ್ಳಿ ಗ್ರಾಮಸ್ಥರು ತಮಗಾಗುತ್ತಿರುವ ತೊಂದರೆಯನ್ನು ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ ಅವರಲ್ಲಿ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಆದರೆ ಮಾಧ್ಯಮ ಕೆಮೆರಾಗಳ ಮುಂದೆ ವಿರೋಧ ಪಕ್ಷಗಳ ನಾಯಕರ ಗುಡುಗುವ ರೇಣುಕಾಚಾರ್ಯರು ಅಕ್ರಮ ಮಣ್ಣು ಗಣಿಗಾರಿಕೆ ನಡೆಸುವವರ ವಿರುದ್ಧ ಇನ್ನೂ ಗುಡುಗಿಲ್ಲವಂತೆ.

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೆಂಗನಳ್ಳಿ (Kengnalli) ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ತಿಂಗಳುಗಳಿಂದ ಅಕ್ರಮ ಮಣ್ಣು ಗಣಿಗಾರಿಕೆಯಿಂದ (soil mining) ಬದುಕು ಅಕ್ಷರಶಃ ನರಕ ಸದೃಶವಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಕೆಂಗನಳ್ಳಿಯಿಂದ ಪ್ರತಿದಿನ 100-150 ಟ್ರ್ಯಾಕ್ಟರ್ ಲೋಡ್ ಗಳಷ್ಟು ಮಣ್ಣನ್ನು ಸಾಗಿಸಲಾಗುತ್ತಿದೆ ಅಂತ ಅವರು ದೂರುತ್ತಿದ್ದಾರೆ. ಮಣ್ಣನ್ನು ಅಗೆಯುವಾಗ ಮತ್ತು ಲೋಡ್ ಮಾಡುವಾಗ ಹಾರುವ ಧೂಳು ಮನೆಗಳನ್ನು ಸೇರಿ ಮಕ್ಕಳು ಹಾಗೂ ವಯಸ್ಸಾದವರು ಉಸಿರಾಟದ ಸಮಸ್ಯೆಗಳಿಂದ ಬಳಲುವಂತೆ ಮಾಡುತ್ತಿದೆ. ಮಣ್ಣನ್ನು ರಾತ್ರಿ ಸಮಯದಲ್ಲಿ ಸಾಗಿಸುವುದರಿಂದ ವಾಹನಗಳ ಓಡಾಟದ ಸದ್ದು ಗ್ರಾಮಸ್ಥರನ್ನು (residents) ಪ್ರತಿದಿನ ನಿದ್ರೆಯಿಂದ ವಂಚಿಸುತ್ತಿದೆ. ಈ ಅಜ್ಜಿ ಕಣ್ಣಲ್ಲಿ ನೀರು ಹಾಕುತ್ತಾ ತಾನು ಅನುಭವಿಸುತ್ತಿರುವ ಕಷ್ಟ ಮತ್ತು ತಾಪತ್ರಯವನ್ನು ಟಿವಿ9 ಕನ್ನಡ ವಾಹಿನಿಯ ದಾವಣಗೆರೆ ಪ್ರತಿನಿಧಿಯೊಂದಿಗೆ ತೋಡಿಕೊಂಡಿದ್ದಾರೆ. ಅವರ ಮನೆಯಲ್ಲಿ ಬಾಣಂತಿ ಮತ್ತು ಹಸುಳೆ ಇದ್ದಾರೆ. ಮಗು ಅನುಭವಿಸುತ್ತಿರಬಹುದಾದ ಸಮಸ್ಯೆಯನ್ನು ಒಮ್ಮೆ ಯೋಚಿಸಿ ನೋಡಿ.

ಕೆಂಗನಳ್ಳಿ ಗ್ರಾಮಸ್ಥರು ತಮಗಾಗುತ್ತಿರುವ ತೊಂದರೆಯನ್ನು ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ ಅವರಲ್ಲಿ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಆದರೆ ಮಾಧ್ಯಮ ಕೆಮೆರಾಗಳ ಮುಂದೆ ವಿರೋಧ ಪಕ್ಷಗಳ ನಾಯಕರ ಗುಡುಗುವ ರೇಣುಕಾಚಾರ್ಯರು ಅಕ್ರಮ ಮಣ್ಣು ಗಣಿಗಾರಿಕೆ ನಡೆಸುವವರ ವಿರುದ್ಧ ಇನ್ನೂ ಗುಡುಗಿಲ್ಲವಂತೆ. ಸರಿ, ನಾನು ಅವರೊಂದಿಗೆ ಮಾತಾಡುತ್ತೇನೆ ಎಂಬ ಆಶ್ವಾಸನೆ ಮಾತ್ರ ಜನರಿಗೆ ಸಿಗುತ್ತಿದೆಯಂತೆ. ಹಿರಿಯ ಮಹಿಳೆಗೆ ಶಾಸಕರ ನಿರ್ಲಿಪ್ತತೆ ಮತ್ತು ನಿಷ್ಕಾಳಜಿಯಿಂದ ಅದೆಷ್ಟು ರೋಸಿಹೋಗಿದೆಯೆಂದರೆ, ಅವರು ನನ್ನ ಮನೆಯಲ್ಲಿ ಬಂದಿರಲಿ, ನಾವು ಅವರ ಮನೆಗೆ ಹೋಗುತ್ತೇವೆ, ಆಗಲಾದರೂ ಅವರಿಗೆ ನಾವು ಪಡುತ್ತಿರುವ ಸಂಕಟ ಅರ್ಥವಾದೀತು ಅನ್ನುತ್ತಾರೆ.

ಅಲ್ಲಿ ನಡೆಯುತ್ತಿರೋದು ಅಕ್ರಮ ಗಣಿಗಾರಿಕೆ ಅಂತಾದರೆ, ಶಾಸಕರ ಅದನ್ನು ನಿಲ್ಲಿಸಲು ಇರುವ ಅಡಚಣೆಯಾದರೂ ಏನು? ಗ್ರಾಮಸ್ಥರಿಗೆ ಆರ್ಥವಾಗದಿರುವ ಪ್ರಶ್ನೆ ಇದು. ಪಕ್ಷದಲ್ಲಿ ಒಳ್ಳೆಯ ಹೆಸರಿಟ್ಟುಕೊಂಡಿರುವ ರೇಣುಕಾಚಾರ್ಯ ಅವರು ಕೆಂಗನಳ್ಳಿ ಜನರಿಗೆ ಇನ್ನು ಸಬೂಬುಗಳನ್ನು ಹೇಳುತ್ತಾ ಕೂರಲಾಗದು. ಜನ ಅವರಿಂದ ಕ್ರಮ ನಿರೀಕ್ಷಿಸುತ್ತಿದ್ದಾರೆ. ಅವರು ಬೇಗ ಎಚ್ಚೆತ್ತುಕೊಳ್ಳಲಿ ಮತ್ತು ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸಲಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada