AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಲೇಡಿ ಸಿಂಗಂ ರಿಚಾ ಘೋಷ್​ಗೆ ಡಿಎಸ್​ಪಿ ಹುದ್ದೆ; ವಿಡಿಯೋ

ಆರ್​ಸಿಬಿ ಲೇಡಿ ಸಿಂಗಂ ರಿಚಾ ಘೋಷ್​ಗೆ ಡಿಎಸ್​ಪಿ ಹುದ್ದೆ; ವಿಡಿಯೋ

ಪೃಥ್ವಿಶಂಕರ
|

Updated on:Nov 08, 2025 | 10:21 PM

Share

Richa Ghosh Honored: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐಸಿಸಿ ವಿಶ್ವಕಪ್ ಗೆಲುವಿನ ನಂತರ, ಸ್ಟಾರ್ ಆಟಗಾರ್ತಿ ರಿಚಾ ಘೋಷ್ ಅವರನ್ನು ಪಶ್ಚಿಮ ಬಂಗಾಳ ಸರ್ಕಾರ ಸನ್ಮಾನಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಿಚಾಗೆ ಡಿಎಸ್‌ಪಿ ಹುದ್ದೆ ಮತ್ತು ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಬಂಗ ಭೂಷಣ ಪ್ರದಾನ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ 12 ಸಿಕ್ಸರ್‌ಗಳನ್ನು ಬಾರಿಸಿ ವಿಶ್ವ ದಾಖಲೆ ಸರಿಗಟ್ಟಿದ ರಿಚಾ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಮೊಟ್ಟ ಮೊದಲ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರ ಸಾಧನೆಗೆ ದೇಶಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಆಟಗಾರ್ತಿಯರು ಪ್ರತಿನಿಧಿಸುವ ರಾಜ್ಯಗಳಲ್ಲೂ ಅವರಿಗೆ ಅದ್ಧೂರಿ ಸ್ವಾಗತ ಸಿಗುತ್ತಿದೆ. ಹಾಗೆಯೇ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳ ವಿಶ್ವ ಚಾಂಪಿಯನ್ ಆಟಗಾರ್ತಿಯರಿಗೆ ಬಹುಮಾನ ನೀಡುತ್ತಿವೆ. ಈ ಸರಣಿಯಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ರಿಚಾ ಘೋಷ್ ಅವರನ್ನು ಗೌರವಿಸಿದೆ.

2025 ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ ಅವರಿಗೆ ಶುಕ್ರವಾರ ತಮ್ಮ ತವರು ಸಿಲಿಗುರಿಗೆ ಆಗಮಿಸಿದಾಗ ಭವ್ಯ ಸ್ವಾಗತ ದೊರೆಯಿತು. ನಂತರ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(CAB) ವಿಶೇಷ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿತು.

ನವೆಂಬರ್ 8 ರ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 22 ವರ್ಷದ ರಿಚಾ ಅವರಿಗೆ ಡಿಎಸ್‌ಪಿ ಹುದ್ದೆ ನೀಡಿ ಗೌರವಿಸಿದರು. ಇದರ ಜೊತೆಗೆ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಬಂಗ ಭೂಷಣವನ್ನು ಸಹ ಪ್ರದಾನ ಮಾಡಿದರು. ಹಾಗೆಯೇ ಸಿಎಬಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಚಾ ಅವರಿಗೆ ಭಾರಿ ಮೊತ್ತದ ಬಹುಮಾನವನ್ನು ನೀಡಿದರು. ಇದರ ಜೊತೆಗೆ ಅವರಿಗೆ ಚಿನ್ನ ಲೇಪಿತ ಬ್ಯಾಟ್ ಮತ್ತು ಚೆಂಡನ್ನು ಸಹ ನೀಡಲಾಯಿತು.

ವಿಶ್ವಕಪ್‌ನಲ್ಲಿ ಎಂಟು ಇನ್ನಿಂಗ್ಸ್‌ಗಳನ್ನಾಡಿದ ರಿಚಾ 235 ರನ್ ಬಾರಿಸಿದರು. ಹಾಗೆಯೇ ಇಡೀ ಟೂರ್ನಿಯಲ್ಲಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಂದು ಆವೃತ್ತಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 08, 2025 10:14 PM