ಬಿರುಗಾಳಿಯಲ್ಲಿ ಸಿಲುಕಿದ ಸಚಿನ್ ತೆಂಡೂಲ್ಕರ್ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್; ಕಾಡು ಪ್ರಾಣಿಗಳಿದ್ದ ಜಾಗದಲ್ಲಿ ಲ್ಯಾಂಡಿಂಗ್

Updated on: Sep 12, 2025 | 8:10 PM

Sachin Tendulkar's Africa Trip: ಸಚಿನ್ ತೆಂಡೂಲ್ಕರ್ ಅವರು ತಮ್ಮ ಕುಟುಂಬದೊಂದಿಗೆ ಆಫ್ರಿಕಾ ಪ್ರವಾಸದ ವೇಳೆ ಅನುಭವಿಸಿದ ಅಪಾಯಕಾರಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಿರುಗಾಳಿಯಿಂದಾಗಿ ಅವರ ಖಾಸಗಿ ಜೆಟ್ ಬೇರೆ ಲ್ಯಾಂಡಿಂಗ್ ಸ್ಥಳಕ್ಕೆ ತಿರುಗಿಸಲ್ಪಟ್ಟಿತು. ಆ ಸ್ಥಳದಲ್ಲಿ ಕಾಡು ಪ್ರಾಣಿಗಳು ಇದ್ದುದರಿಂದ, ವಿಮಾನವನ್ನು ಎರಡು ಬಾರಿ ಕೆಳಕ್ಕೆ ಇಳಿಸಿ ಪ್ರಾಣಿಗಳನ್ನು ದೂರ ಓಡಿಸಿ ಸುರಕ್ಷಿತವಾಗಿ ಇಳಿಸಲಾಯಿತು. ಈ ರೋಮಾಂಚಕಾರಿ ಘಟನೆಯ ವಿಡಿಯೋವನ್ನು ಸಚಿನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೆಲವೇ ದಿನಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಆಫ್ರಿಕಾ ಪ್ರವಾಸ ಮಾಡಿದ್ದರು. ಇದೀಗ ಆ ಪ್ರವಾಸದಲ್ಲಿ ನಡೆದ ರೋಮಾಂಚನಕಾರಿ ಘಟನೆಯ ವಿಡಿಯೋವೊಂದನ್ನು ಕ್ರಿಕೆಟ್ ದೇವರು ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಸಚಿನ್ ಹಾಗೂ ಅವರ ಕುಟುಂಬ ಆಫ್ರಿಕಾದ ಮಸಾಯಿ ಮಾರಾಕ್ಕೆ ಖಾಸಗಿ ಜೆಟ್​ನಲ್ಲಿ ತೆರಳಿತ್ತು. ಆ ಸಂದರ್ಭದಲ್ಲಿ ನಡೆದ ಘಟನೆಯ ವಿಡಿಯೋವನ್ನು ಇದೀಗ ಸಚಿನ್ ತೆಂಡೂಲ್ಕರ್ ಬಿಡುಗಡೆ ಮಾಡಿದ್ದಾರೆ.

ವೀಡಿಯೊದಲ್ಲಿ, ಸಚಿನ್ ವಿವರಿಸುತ್ತಾ, ‘ನಾವು ವಿಮಾನದೊಳಗೆ ಇದ್ದೆವು, ಮತ್ತು ಚಂಡಮಾರುತವು ಸಮೀಪಿಸುತ್ತಿರುವುದನ್ನು ನೀವು ನೋಡಬಹುದು. ಮೂಲತಃ, ನಮ್ಮ ಜೆಟ್ ಆ ಚಂಡಮಾರುತವು ಈಗ ಇರುವ ಸ್ಥಳದಲ್ಲಿಯೇ ಇಳಿಯಬೇಕಿತ್ತು. ನಮ್ಮ ಜೆಟ್ ಲ್ಯಾಂಡಿಂಗ್ ಮಾಡುವ ಸ್ಥಳದಿಂದ ಕೇವಲ ಎರಡು ಮೈಲುಗಳಷ್ಟು ದೂರದಲ್ಲಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ಅಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಬಿರುಗಾಳಿಯಿಂದಾಗಿ ಜೆಟ್ ಅನ್ನು ಮತ್ತೊಂದು ಲ್ಯಾಂಡಿಂಗ್ ಸ್ಥಳಕ್ಕೆ ತಿರುಗಿಸಬೇಕಾಯಿತು. ಆದರೆ ತೊಂದರೆಗಳು ಅಲ್ಲಿಗೆ ಮುಗಿಯಲಿಲ್ಲ.

ನಾವು ಯಾವ ಪರ್ಯಾಯ ಸ್ಥಳದಲ್ಲಿ ಜೆಟ್ ಅನ್ನು ಇಳಿಸಲು ಪ್ರಯತ್ನಿಸಿದೆವೋ ಆ ರನ್​ ವೇ ತುಂಬ ಕಾಡು ಪ್ರಾಣಿಗಳ ಹಿಂಡಿತ್ತು. ಆದ್ದರಿಂದ, ನಾವು ಅವುಗಳನ್ನು ಅಲ್ಲಿಂದ ಚೆದುರಿಸಲು ನಮ್ಮ ಜೆಟ್​ ಅನ್ನು ಎರಡು ಬಾರಿ ಕೆಳಕ್ಕೆ ಇಳಿಸಿ ನಂತರ ಮತ್ತೆ ಹಾರಿಸಿದೆವು. ಹೀಗಾಗಿ ಪ್ರಾಣಿಗಳು ರನ್​ವೇ ಇಂದ ದೂರಕ್ಕೆ ಹೊದವು. ಅಂತಿಮವಾಗಿ ನಮ್ಮ ಜೆಟ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಯಿತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 12, 2025 08:08 PM