ಕಾವೇರಿ ನದಿ ನೀರು ವಿಚಾರದಲ್ಲಿ ಯಾವ ಕಾರಣಕ್ಕೂ ರಾಜ್ಯದ ಹಿತ ಬಲಿಕೊಡಲ್ಲ: ಜಿ ಪರಮೇಶ್ವರ, ಗೃಹ ಸಚಿವ

ಅರುಣ್​ ಕುಮಾರ್​ ಬೆಳ್ಳಿ

Updated on: Sep 21, 2023 | 5:15 PM

ಸೋನಿಯಾ ಗಾಂಧಿಯವರು ಯಾವ ಸಂವೈಧಾನಿಕ ಅಧಿಕಾರದಲ್ಲಿ ಮಧ್ಯೆ ಪ್ರವೇಶಿಸುವುದು ಸಾಧ್ಯ? ಅವರ ಮಾತನ್ನು ತಮಿಳುನಾಡು ಸರ್ಕಾರ ಯಾಕೆ ಕೇಳುತ್ತದೆ? ಎಂದು ಅವರು ಹೇಳಿದರು. ತಮ್ಮ ಸರ್ಕಾರ ಖಂಡಿತವಾಗಿಯೂ ರಾಜ್ಯದ ಹಿತ ಕಾಪಾಡುತ್ತದೆ, ಮುಖ್ಮಮಂತ್ರಿ ಸಿದ್ದರಾಮಯ್ಯ ದೆಹಲಿಯಿಂದ ವಾಪಸ್ಸಾದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಪರಮೇಶ್ವರ ಹೇಳಿದರು.

ಬೆಂಗಳೂರು: ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ (DMK) ಜೊತೆ ವಿರಸವೇರ್ಪಡಬಾರದು ಅನ್ನೋ ಕಾರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ (Congress government) ತಮಿಳುನಾಡು ಕಾವೇರಿ ನದಿ ನೀರು ಹರಿಬಿಟ್ಟು ನಾಡಿನ ರೈತರ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ ಎಂಬ ಆರೋಪವನ್ನು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ತಳ್ಳಿ ಹಾಕಿದರು. ಇಂದು ಸುಪ್ರೀಮ್ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಹಾಗೆ ಮಾಡಬೇಕಿದ್ದರೆ ಇಷ್ಟೆಲ್ಲ ಹೋರಾಟ ನಡೆಸುವ ಅಗತ್ಯ ಸರ್ಕಾರಕ್ಕಿರಲಿಲ್ಲ, ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಅಗತ್ಯ ಸರ್ಕಾರಕ್ಕಿಲ್ಲ, ಪ್ರಾಧಿಕಾರ 15,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿತ್ತು, ಆದರೆ ನಾವು ಕಾಡಿ ಬೇಡಿ ಅದನ್ನು 5,000 ಕ್ಯೂಸೆಕ್ ಗಳಿಗೆ ಇಳಿಸಿದೆವು ಎಂದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ ಡಿಎಂಕೆ ನಾಯಕರಿಗೆ ಹೇಳಬೇಕು ಎಂಬ ವಾದವನ್ನೂ ಪರಮೇಶ್ವರ್ ಅಲ್ಲಗಳೆದರು. ಸೋನಿಯಾ ಗಾಂಧಿಯವರು ಯಾವ ಸಂವೈಧಾನಿಕ ಅಧಿಕಾರದಲ್ಲಿ ಮಧ್ಯೆ ಪ್ರವೇಶಿಸುವುದು ಸಾಧ್ಯ? ಅವರ ಮಾತನ್ನು ತಮಿಳುನಾಡು ಸರ್ಕಾರ ಯಾಕೆ ಕೇಳುತ್ತದೆ? ಎಂದು ಅವರು ಹೇಳಿದರು. ತಮ್ಮ ಸರ್ಕಾರ ಖಂಡಿತವಾಗಿಯೂ ರಾಜ್ಯದ ಹಿತ ಕಾಪಾಡುತ್ತದೆ, ಮುಖ್ಮಮಂತ್ರಿ ಸಿದ್ದರಾಮಯ್ಯ ದೆಹಲಿಯಿಂದ ವಾಪಸ್ಸಾದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಪರಮೇಶ್ವರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.