ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್

Updated on: Dec 21, 2025 | 2:17 PM

India vs Pakistan U19 Asia Cup final: ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಏಕೆಂದರೆ ಲೀಗ್ ಹಂತದಲ್ಲೇ ಪಾಕಿಸ್ತಾನ್ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಫೈನಲ್​ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಮೀರ್ ಮಿನ್​ಹಾಸ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಸಮೀರ್ ಮಿನ್​ಹಾಸ್ ಉತ್ತಮ ಆರಂಭ ಒದಗಿಸಿದರು.

ಆರಂಭದಿಂದಲೇ ಅತ್ಯುತ್ತಮ ಹೊಡೆತಗಳೊಂದಿಗೆ ಗಮನ ಸೆಳೆದ ಸಮೀರ್ ಮಿನ್​ಹಾಸ್ ಕೇವಲ 71 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸಮೀರ್ 113 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 17 ಫೋರ್​ಗಳೊಂದಿಗೆ 172 ರನ್ ಬಾರಿಸಿದರು.

ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 347 ರನ್ ಕಲೆಹಾಕಿದೆ. ಅದರಂತೆ ಈ ಪಂದ್ಯದಲ್ಲಿ ಗೆಲ್ಲಲು ಟೀಮ್ ಇಂಡಿಯಾ 348 ರನ್​​ಗಳಿಸಬೇಕಿದೆ.

ಭಾರತ ಅಂಡರ್-19 ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ (ನಾಯಕ),  ವೈಭವ್ ಸೂರ್ಯವಂಶಿ , ಆರೋನ್ ಜಾರ್ಜ್ , ವಿಹಾನ್ ಮಲ್ಹೋತ್ರಾ , ವೇದಾಂತ್ ತ್ರಿವೇದಿ , ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್) , ಕಾನಿಷ್ಕ್ ಚೌಹಾಣ್ , ಹೆನಿಲ್ ಪಟೇಲ್ , ಖಿಲನ್ ಪಟೇಲ್ , ದೀಪೇಶ್ ದೇವೇಂದ್ರನ್ , ಕಿಶನ್ ಕುಮಾರ್ ಸಿಂಗ್.

ಪಾಕಿಸ್ತಾನ್ ಅಂಡರ್-19 ಪ್ಲೇಯಿಂಗ್ 11: ಸಮೀರ್ ಮಿನ್​ಹಾಸ್,  ಹಮ್ಝ ಝಹೂರ್ (ವಿಕೆಟ್ ಕೀಪರ್) , ಉಸ್ಮಾನ್ ಖಾನ್ ,
ಅಹ್ಮದ್ ಹುಸೇನ್ , ಫರ್ಹಾನ್ ಯೂಸುಫ್ (ನಾಯಕ) , ಹುಜೈಫಾ ಅಹ್ಸಾನ್ , ನಿಖಾಬ್ ಶಫೀಕ್ , ಮೊಹಮ್ಮದ್ ಶಯಾನ್ , ಅಬ್ದುಲ್ ಸುಭಾನ್ , ಮೊಹಮ್ಮದ್ ಸಯ್ಯಮ್ , ಅಲಿ ರಾಝ.

Published on: Dec 21, 2025 01:52 PM