7 ಭರ್ಜರಿ ಸಿಕ್ಸ್, 14 ಫೋರ್: ಶರವೇಗದ ಶತಕ ಸಿಡಿಸಿದ ಸಂಜು ಸ್ಯಾಮ್ಸನ್

Updated on: Aug 25, 2025 | 7:23 AM

KCL 2025: ಕೇರಳ ಕ್ರಿಕೆಟ್ ಲೀಗ್​ನಲ್ಲಿ ಟೀಮ್ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ವಿಸ್ಫೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಸ್ಯಾಮ್ಸನ್ ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರೆಸಿದ್ದು, ಈ ಮೂಲಕ ಏಷ್ಯಾಕಪ್ 2025 ರಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.

ಕೇರಳ ಕ್ರಿಕೆಟ್ ಲೀಗ್‌ನ 8ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶರವೇಗದ ಶತಕ ಬಾರಿಸಿ ಅಬ್ಬರಿಸಿದ್ದಾರೆ. ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಹಾಗೂ ಕೊಲ್ಲಂ ಸೈಲರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಚ್ಚಿ ಬ್ಲೂ ಟೈಗರ್ಸ್ ತಂಡದ ನಾಯಕ ಸಾಲಿ ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಲಂ ಸೈಲರ್ಸ್ ಪರ ವಿಷ್ಣು ವಿನೋದ್ ಹಾಗೂ ಸಚಿನ್ ಬೇಬಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಕೇವಲ 41 ಎಸೆತಗಳನ್ನು ಎದುರಿಸಿದ ವಿಷ್ಣು ವಿನೋದ್ 10 ಸಿಕ್ಸ್ ಹಾಗೂ 3 ಫೋರ್ ಗಳೊಂದಿಗೆ 94 ರನ್ ಬಾರಿಸಿದರು‌. ಇನ್ನು ಸಚಿನ್ ಬೇಬಿ 44 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 91 ರನ್ ಚಚ್ಚಿದರು. ಈ ಮೂಲಕ ಕೊಲ್ಲಂ ಸೈಲರ್ಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿತು.

237 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಕೊಚ್ಚಿ ಟೈಗರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ ನಿಂದಲೇ ಮನಸೋ ಇಚ್ಛೆ ಬ್ಯಾಟ್ ಬೀಸಿದ ಸಂಜು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅರ್ಧಶತಕದ ಬಳಿಕ ತೂಫಾನ್ ಬ್ಯಾಟಿಂಗ್ ನೊಂದಿಗೆ ಕೇವಲ 42 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಅಲ್ಲದೆ 51 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 14 ಫೋರ್ ಗಳೊಂದಿಗೆ 121 ರನ್ ಚಚ್ಚಿದರು.

ಸಂಜು ಸ್ಯಾಮ್ಸನ್ ಅವರ ಈ ಶತಕದ ಹೊರತಾಗಿಯೂ ಕೊಚ್ಚಿ ಬ್ಲೂ ಟೈಗರ್ಸ್ ತಂಡಕ್ಕೆ ಕೊನೆಯ 2 ಓವರ್‌ಗಳಲ್ಲಿ 32 ರನ್ ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಆಶಿಕ್ 18 ಎಸೆತಗಳಲ್ಲಿ 48 ರನ್ ಸಿಡಿಸಿದರು. ಅಲ್ಲದೆ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಆಶಿಕ್ ಕೊಚ್ಚಿ ಬ್ಲೂ ಟೈಗರ್ಸ್ ತಂಡಕ್ಕೆ 4 ವಿಕೆಟ್ ಗಳ ಜಯ ತಂದುಕೊಟ್ಟರು.