ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಭಾರಿ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ

Edited By:

Updated on: Feb 20, 2026 | 10:52 AM

ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸಗಳು ನಿಂತಲ್ಲೇ ನಿಂತಿವೆ ಎಂದು ಹಿರಿಯ ಸಚಿವರೇ ಬೇಸರ ಹೊರಹಾಕಿದ್ದಾರೆ. ಪಕ್ಷದಲ್ಲಿನ ಗೊಂದಲಗಳು, ಆಡಳಿತದಲ್ಲಿನ ಜಡತ್ವ ಮತ್ತು ಅನಗತ್ಯ ಜವಾಬ್ದಾರಿಗಳ ಕಾರಣದಿಂದ ಮಂತ್ರಿಗಳು ಅಸಮಾಧಾನಗೊಂಡಿದ್ದಾರೆ. ಈ ಕುರಿತು ಆರೇಳು ಸಚಿವರು ಇತ್ತೀಚೆಗೆ ಸಭೆ ನಡೆಸಿ, ತಮ್ಮ ಮುಂದಿನ ದಾರಿ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಫೆಬ್ರವರಿ 20: ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸಗಳು ನಿಂತಲ್ಲೇ ನಿಂತಿವೆ ಎಂದು ಹಿರಿಯ ಸಚಿವರುಗಳ ವಲಯದಲ್ಲಿಯೇ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಆಡಳಿತದಲ್ಲಿ ಜಡತ್ವ ಆವರಿಸಿದ್ದು, ಪಕ್ಷದಲ್ಲಿನ ಗೊಂದಲಗಳು ಮತ್ತು ಮಂತ್ರಿಗಳಿಗೆ ಅನಗತ್ಯ ಜವಾಬ್ದಾರಿಗಳನ್ನು ವಹಿಸಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಈ ಕುರಿತು ಆರು ಮಂದಿ ಹಿರಿಯ ಸಚಿವರು ಕಳೆದ ವಾರ ಸಭೆ ನಡೆಸಿ, ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಭಾಷಣಗಳು, ಜಾಹೀರಾತುಗಳು ಮತ್ತು ಹೇಳಿಕೆಗಳು ವಾಸ್ತವಕ್ಕೆ ದೂರವಾಗಿದ್ದು, ಕ್ಷೇತ್ರದ ಮತ್ತು ಇಲಾಖೆಯ ಮಟ್ಟದಲ್ಲಿ ಯಾವುದೇ ಕೆಲಸಗಳು ಚುರುಕುಗೊಂಡಿಲ್ಲ ಎಂಬ ಆತಂಕವನ್ನು ಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಸಂಪನ್ಮೂಲ ಕ್ರೋಢೀಕರಣದಂತಹ ಹೆಚ್ಚುವರಿ ಕಾರ್ಯಗಳನ್ನು ಸಚಿವರ ಹೆಗಲಿಗೆ ಹಾಕಿರುವುದರಿಂದ ಇಲಾಖಾ ಕೆಲಸಗಳಿಗೆ ಹಿನ್ನಡೆಯಾಗಿದೆ. ಪಕ್ಷ ಸಂಘಟನೆಯಲ್ಲಿಯೂ ತಮ್ಮನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಬೇಸರ ಮಂತ್ರಿಗಳಲ್ಲಿದೆ. ತಳಮಟ್ಟದ ಕಾರ್ಯಕರ್ತರೂ ಕೂಡ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಈ ಗೊಂದಲಗಳಿಗೆ ಹಿರಿಯ ನಾಯಕರಿಂದ ಪರಿಹಾರ ದೊರೆಯುತ್ತಿಲ್ಲ ಎಂಬುದು ಸಚಿವರ ಮುಖ್ಯ ದೂರು. ಜಡತ್ವದಿಂದ ಕೂಡಿದ ಆಡಳಿತದಲ್ಲಿ ಮುಂದುವರಿಯುವುದಕ್ಕಿಂತ ಸಚಿವ ಸಂಪುಟದಿಂದ ಹೊರಗುಳಿಯುವ ಬಗ್ಗೆಯೂ ಕೆಲ ಸಚಿವರು ಆಲೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 20, 2026 10:51 AM