Loading video

ತೂಫಾನ್ ಅರ್ಧಶತಕ ಸಿಡಿಸಿ ಮತ್ತೊಮ್ಮೆ ಪಂದ್ಯ ಗೆಲ್ಲಿಸಿದ ಶಿಮ್ರಾನ್ ಹೆಟ್ಮೆಯರ್

Updated on: Jun 29, 2025 | 12:54 PM

Shimron Hetmyer : ಎಂಐ ನ್ಯೂಯಾರ್ಕ್ ವಿರುದ್ಧದ ಪಂದ್ಯದಲ್ಲಿ 238 ರನ್​ಗಳನ್ನು ಚೇಸ್ ಮಾಡುವಲ್ಲಿ ಶಿಮ್ರಾನ್ ಹೆಟ್ಮೆಯರ್ ಪ್ರಮುಖ ಪಾತ್ರವಹಿಸಿದ್ದರು. ಆ ಪಂದ್ಯದಲ್ಲಿ 40 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿ ಕೊನೆಯ ಎಸೆತದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್​ ವಿರುದ್ಧ ಅಜೇಯ 97 ರನ್ ಬಾರಿಸಿ ಸಿಯಾಟಲ್ ಓರ್ಕಾಸ್ ತಂಡಕ್ಕೆ ದಾಖಲೆಯ ಜಯ ತಂದುಕೊಟ್ಟಿದ್ದ ಶಿಮ್ರಾನ್ ಹೆಟ್ಮೆಯರ್ ಇದೀಗ ಮತ್ತೊಮ್ಮೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಅದು ಕೂಡ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ.

ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ಪರ ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೆಯರ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಮೇಜರ್ ಲೀಗ್ ಕ್ರಿಕೆಟ್ ಇತಿಹಾಸದ 2ನೇ ವೇಗದ ಅರ್ಧಶತಕ ಎಂಬುದು ವಿಶೇಷ. ಅಲ್ಲದೆ 26 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 64 ರನ್ ಸಿಡಿಸಿದರು. ಈ ಮೂಲಕ 19.5 ಓವರ್​ಗಳಲ್ಲಿ  ಗುರಿ ತಲುಪಿಸಿ ಸಿಯಾಟಲ್ ಓರ್ಕಾಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಇದಕ್ಕೂ ಮುನ್ನ ಎಂಐ ನ್ಯೂಯಾರ್ಕ್ ವಿರುದ್ಧದ ಪಂದ್ಯದಲ್ಲಿ 238 ರನ್​ಗಳನ್ನು ಚೇಸ್ ಮಾಡುವಲ್ಲಿ ಶಿಮ್ರಾನ್ ಹೆಟ್ಮೆಯರ್ ಪ್ರಮುಖ ಪಾತ್ರವಹಿಸಿದ್ದರು. ಆ ಪಂದ್ಯದಲ್ಲಿ 40 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿ ಕೊನೆಯ ಎಸೆತದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಮ್ಯಾಚ್ ಫಿನಿಶಿಂಗ್ ಇನಿಂಗ್ಸ್ ಆಡುವ ಮೂಲಕ ಶಿಮ್ರಾನ್ ಹೆಟ್ಮೆಯರ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ.