ಕನ್ನಡ ನಾಡಲ್ಲೇ ಕನ್ನಡ ಕಾಯುವ ಸ್ಥಿತಿ ಬಂದಿರುವುದು ದುರ್ದೈವ: ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ

Edited By:

Updated on: Nov 11, 2026 | 4:47 PM

ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದ ಹಿಂದಿನ ಕತೆಯನ್ನು ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆಯವರು ತಮ್ಮನ್ನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರನ್ನಾಗಿ ನೇಮಿಸಿದ್ದು ಹೇಗೆಂದು ವಿವರಿಸಿದರು. ಕನ್ನಡವನ್ನು ಕಾಯಲು ಸಮಿತಿ ಬೇಕಾಗಿರುವುದು ದುರ್ದೈವ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೈಸೂರು, ನ.11: “ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯನ್ನು ಕಾಯುವ ಕೆಲಸ ಮತ್ತು ಕಾವಲು ಸಮಿತಿ ಇರುವುದು ಅತ್ಯಂತ ಬೇಸರದ ಸಂಗತಿ ಮತ್ತು ದುರ್ದೈವ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ನೂತನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ನಾನು ಸಾಹಿತಿಯಲ್ಲ, ಕೇವಲ ಸಾಹಿತ್ಯದ ಅಭಿಮಾನಿ. ನಾನು ಮೊದಲ ಬಾರಿ ಶಾಸಕನಾದಾಗ ನನಗೆ ಬೇಡ ಎಂದರೂ ‘ಕನ್ನಡ ಕಾವಲು ಸಮಿತಿ’ಯ ಮೊದಲ ಅಧ್ಯಕ್ಷ ಸ್ಥಾನವನ್ನು ಕೊಟ್ಟಿದ್ದರು. ಆ ಹುದ್ದೆಯನ್ನು ವಹಿಸಿಕೊಂಡು ಕೆಲಸ ಮಾಡಿದ್ದೆ” ಎಂದು ಸಿದ್ದರಾಮಯ್ಯ ತಮ್ಮ ಆರಂಭಿಕ ರಾಜಕೀಯ ದಿನಗಳನ್ನು ಸ್ಮರಿಸಿಕೊಂಡರು. “ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆಯ ಯಾವ ರಾಜ್ಯಗಳಲ್ಲೂ ಅವರ ಭಾಷೆಯನ್ನು ಕಾಯಲು ಇಂತಹ ‘ಕಾವಲು ಸಮಿತಿ’ಗಳಿಲ್ಲ. ಆದರೆ, ನಮ್ಮ ಕರ್ನಾಟಕದಲ್ಲಿ ಮಾತ್ರ ಭಾಷೆಯನ್ನು ಕಾಯಲು ಸಮಿತಿ ಇರುವುದು ನಿಜಕ್ಕೂ ಆಲೋಚಿಸಬೇಕಾದ ಮತ್ತು ಬೇಸರ ತರಿಸುವ ವಿಚಾರ” ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಮ್ಮ ಆಯುಷ್ಯ ಹಾಗೂ ವೀರಪ್ಪ ಮೊಯ್ಲಿಯವರ ಸಾಹಿತ್ಯ ಸೇವೆ ಕುರಿತು ಮನಬಿಚ್ಚಿ ಮಾತನಾಡಿದ ಸಿದ್ದರಾಮಯ್ಯ, ನನಗೆ 100 ವರ್ಷ ಬದುಕಬೇಕು ಎಂಬ ಆಸೆಯಿದೆ. ಆದರೆ, ಅದನ್ನು ಖಚಿತವಾಗಿ ಹೇಳಲು ಬರುವುದಿಲ್ಲ. ಏಕೆಂದರೆ ಜೀವಿತಾವಧಿ ಎಂಬುದು ನಮ್ಮ ಕೈಯಲ್ಲಿ ಇಲ್ಲ” ಎಂದರು. “ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ನೂರಷ್ಟೇ ಅಲ್ಲ, 120 ವರ್ಷಗಳ ಕಾಲ ಸಕ್ರಿಯವಾಗಿ ಬದುಕಲಿ. ಅವರ ಬೃಹತ್ ಸಾಹಿತ್ಯಿಕ ಕೊಡುಗೆಗೆ ‘ಜ್ಞಾನಪೀಠ’ ಪ್ರಶಸ್ತಿ ಗೌರವ ದೊರೆಯುವಂತಾಗಲಿ” ಎಂದು ಹಾರೈಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More