ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆದ್ದ ಬೆನ್ನಲ್ಲೇ ಎಫ್​ಐಆರ್! ಬಿಜೆಪಿಯ ಜೀವರಾಜ್​ ಹೇಳಿದ್ದೇನು?

Edited By:

Updated on: May 04, 2026 | 10:54 AM

ಶೃಂಗೇರಿ ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆದ್ದು ಶಾಸಕ ಸ್ಥಾನದ ಪ್ರಮಾಣಪತ್ರ ಪಡೆದ ಡಿ.ಎನ್. ಜೀವರಾಜ್, ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದ್ದು, ಅಕ್ರಮದ ಆರೋಪಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಎದುರಿಸುವುದಾಗಿ ಅವರು ತಿಳಿಸಿದ್ದಾರೆ.

ಚಿಕ್ಕಮಗಳೂರು, ಮೇ 4: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಂತಿಮವಾಗಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರು ಇಂದು (ಮೇ 4) ಅಧಿಕೃತವಾಗಿ ಶಾಸಕ ಸ್ಥಾನದ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಕಳೆದ ಮೂರು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಲಭಿಸಿದ ಈ ಜಯವನ್ನು ಅವರು ‘ಸತ್ಯಕ್ಕೆ ಸಿಕ್ಕ ಜಯ’ ಎಂದು ಬಣ್ಣಿಸಿದ್ದಾರೆ. ತಮ್ಮ ಗೆಲುವಿನ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಕುರಿತು ಟಿವಿ9 ಗೆ ಪ್ರತಿಕ್ರಿಯಿಸಿದ ಜೀವರಾಜ್, ‘ಸೋತ ಮೇಲೆ ಟ್ಯಾಂಪರಿಂಗ್ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಗೆದ್ದಾಗ ಅದು ಸಾಂವಿಧಾನಿಕ ಗೆಲುವು, ನಾವು ಗೆದ್ದರೆ ಟ್ಯಾಂಪರಿಂಗ್ ಎನ್ನುತ್ತಾರೆ. ನನ್ನ ಮೇಲೆ ಎಫ್‌ಐಆರ್ ದಾಖಲಿಸಲು ಅವಕಾಶವೇ ಇಲ್ಲದಿದ್ದರೂ ಅಕ್ರಮವಾಗಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಗುಡುಗಿದ್ದಾರೆ.

ಮರು ಎಣಿಕೆಯಲ್ಲಿ ಆಗಿದ್ದೇನು?

2023ರ ಚುನಾವಣೆ ನಂತರ ಮತ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಜೀವರಾಜ್, ಮರು ಎಣಿಕೆ ವೇಳೆ ಈ ಹಿಂದೆ ತಿರಸ್ಕೃತಗೊಂಡಿದ್ದ ಮತಗಳಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಮರು ಎಣಿಕೆ ವೇಳೆ 25 ಮತಗಳಿರುವ ಬಂಡಲ್‌ಗಳು ತಿರಸ್ಕೃತವಾಗಿವೆ. ಈ ಹಿಂದೆ ಅಕ್ರಮವಾಗಿ ಮತಗಳನ್ನು ಸೇರಿಸಿ ಗೆಲ್ಲುವಂತೆ ಮಾಡಲಾಗಿತ್ತು. ನಾವು ಮೊದಲೇ ಮತಪತ್ರಗಳಿಗೆ ಭದ್ರತೆ ನೀಡಿ ಎಂದು ಕೇಳಿಕೊಂಡಿದ್ದೆವು ಎಂದು ಅವರು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಸದ್ಯ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆಯಲ್ಲಿ ರಾಜೇಗೌಡ ವಿರುದ್ಧ ಜೀವರಾಜ್ ಜಯ ಸಾಧಿಸಿದ್ದು, ಶೃಂಗೇರಿಯ ನೂತನ ಶಾಸಕರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us