ಅಧ್ಯಕ್ಷನಾಗಿ ಎರಡು ತಿಂಗಳಾದರೂ ವಿಜಯೇಂದ್ರಗೆ ಸೋಮಣ್ಣರೊಂದಿಗೆ ಮಾತಾಡಲಾಗಿಲ್ಲ!
ಹಾಗೆ ನೋಡಿದರೆ, ವಿಜಯೇಂದ್ರ ಮುಂದಿರುವ ಸವಾಲು ದೊಡ್ಡದು. ವಿಷಯ ಅವರು ತಿಳಿದುಕೊಂಡಿರುವಷ್ಟು ಸುಲಭವಾಗಿಲ್ಲ. ಅಧ್ಯಕ್ಷನಾಗಿ ಎರಡು ತಿಂಗಳು ಕಳೀತಾ ಬಂದರೂ ಅವರಿಗೆ ಸೌಮ್ಯ ಸ್ವಭಾವದ ಸೋಮಣ್ಣರೊಂದಿಗೆ ಮಾತಾಡುವುದು ಸಾಧ್ಯವಾಗಿಲ್ಲ. ಇನ್ನು ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೇಗೆ ನಿಭಾಯಿಸುತ್ತಾರೆ? ಇದು ನಿಸ್ಸಂದೇಹವಾಗಿ ಮಿಲಿಯನ್ ಡಾಲರ್ ಪ್ರಶ್ನೆ!
ಚಾಮರಾಜನಗರ: ಜಿಲ್ಲೆಯ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಪತ್ರಿಕಾ ಗೋಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಕೆಲ ಪ್ರಶ್ನೆಗಳಿಗೆ ಸಮರ್ಪಕ ಪ್ರತಿಕ್ರಿಯೆ ನೀಡದೆ ತೇಲಿಸಿಬಿಡುವ ಪ್ರಯತ್ನ ಮಾಡಿದರು. ಪಕ್ಷದ ಹಿರಿಯ ನಾಯಕ ವಿ ಸೋಮಣ್ಣ (V Somanna) ಬಗ್ಗೆ ವಿಜಯೇಂದ್ರ ನಿಲುವು ಅಸ್ಪಷ್ಟವಾಗಿದೆ. ನಿಮಗೆ ಗೊತ್ತಿರುವ ಹಾಗೆ, ಪಕ್ಷದ ರಾಜ್ಯಾಧ್ಯಕ್ಷ (state president) ಆದಾಗಿನಿಂದ ಸೋಮಣ್ಣ ಅವರೊಂದಿಗೆ ಮಾತಾಡುವುದಾಗಿ ಹೇಳುತ್ತಿದ್ದಾರೆ. ಅವರು ಅಧ್ಯಕ್ಷರಾಗಿ ಆಲ್ಮೋಸ್ಟ್ ಎರಡು ತಿಂಗಳಾದರೂ ಮುಹೂರ್ತವಿನ್ನೂ ಕೂಡಿ ಬಂದಿಲ್ಲವೇ? ಇಂದು ಬೆಂಗಳೂರಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸೋಮಣ್ಣ, ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣರಾದವರನ್ನು ವಿಜಯೇಂದ್ರ ಜೊತೆಗಿಟ್ಟುಕೊಂಡು ತಿರುಗುತ್ತಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಿ ತನಗಾಗಿರುವ ಅನ್ಯಾಯ ಸರಿಪಡಿಸದಿದ್ದರೆ ಸಿಡಿದೇಳುವುದು ಗ್ಯಾರಂಟಿ ಅಂತ ಹೇಳಿದರು. ಅದೇ ವಿಷಯವನ್ನು ವಿಜಯೇಂದ್ರಗೆ ತಿಳಿಸಿದಾಗ, ಅವರು ಹಾಗೇನೂ ಹೇಳಿರಲ್ಲ ಅದೆಲ್ಲ ಹಳೆಯ ಕತೆ ಎಂದು ಹೇಳಿ, ಅವರನ್ನು ಕರೆಸಿ ಮಾತಾಡಿ ಅಸಮಾಧಾನವನ್ನು ದೂರ ಮಾಡುವುದಾಗಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ