ನಮಗೆ ಶಿಕ್ಷಣ ಬೇಕು ಮತ್ತು ಹಿಜಾಬ್ ಸಹ ಬೇಕು ಎನ್ನುತ್ತಾರೆ ಕುಂದಾಪುರ ಸರ್ಕಾರಿ ಕಾಲೇಜಿನಿಂದ ಹೊರದೂಡಲ್ಪಟ್ಟಿರುವ ವಿದ್ಯಾರ್ಥಿನಿಯರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2022 | 11:17 PM

ಮೊದಲೆಲ್ಲ ತಮ್ಮ ಅಮ್ಮಂದಿರು ಅಕ್ಕಂದಿರೆಲ್ಲ ಹಿಜಾಬ್ ಧರಿಸಿಯೇ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಆಗ ಇಲ್ಲದ ವಿರೋಧ ಈಗ ಯಾಕೆ? ಅವರೆಲ್ಲ ಓದು ಮುಗಿಸಿ ಬದುಕಿನಲ್ಲಿ ಸೆಟ್ಲ್ ಆಗಿದಾರೆ, ತಮಗ್ಯಾಕೆ ತೊಂದರೆ ಕೊಡಲಾಗುತ್ತಿದೆ. ನಮಗೆ ಶಿಕ್ಷಣವೂ ಬೇಕು ಮತ್ತು ಹಿಜಾಬ್ ಸಹ ಬೇಕು ಅನ್ನುತ್ತಾಳೆ ವಿದ್ಯಾರ್ಥಿನಿ.

ಹಿಜಾಬ್ (Hijab) ಪ್ರಕರಣ ನಿಶ್ಚಿತವಾಗಿಯೂ ತಾರಕಕ್ಕೇರಿದೆ. ಇದು ಎಲ್ಲಿಗೆ ಮುಟ್ಟಲಿದೆ ಅಂತ ಕನ್ನಡಿಗರಿಗಂತೂ ಅರ್ಥವಾಗುತ್ತಿಲ್ಲ. ಉಡುಪಿಯಲ್ಲಿ (Udupi) ಶುರುವಾದ ವಿವಾದ ಈಗ ಕ್ರಮೇಣವಾಗಿ ಬೇರೆ ಕಡೆಗಳಿಗೂ ಹಬ್ಬುತ್ತಿದೆ. ಉಡುಪಿಯಿಂದ ಸಮಾರು 40 ಕಿಮೀ ದೂರವಿರುವ ಕುಂದಾಪುರದಲ್ಲಿ (Kundapura) ಹಿಜಾಬ್ ವಿವಾದ ತಲೆದೋರಿದೆ. ಕುಂದಾಪುರ ಉಡುಪಿಗಿಂತ ಒಂದ ಹೆಜ್ಜೆ ಮುಂದೆ ಹೋಗಿದೆ ಆಂದರೆ ಉತ್ಪ್ರೇಕ್ಷೆ ಅನಿಸದು. ಯಾಕೆ ಅಂತೀರಾ? ಮಂಗಳೂರು ಟಿವಿ9 ವರದಿಗಾರ ಪೃಥ್ವಿರಾಜ ಬೊಮ್ಮನಕೆರೆ ಕಳಿಸಿರುವ ಈ ವರದಿ ನೋಡಿ. ಸರ್ಕಾರಿ ಕಾಲೇಜೊಂದರ ಮೇನ್ ಗೇಟ್ ಮುಚ್ಚಲಾಗಿದೆ ಮತ್ತು ಹೊರಗಡೆ ಹಿಜಾಬ್ ಧರಿಸಿರುವ ಕೆಲ ವಿದ್ಯಾರ್ಥಿನಿಯರು ಕುಳಿತಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಉಪನ್ಯಾಸಕರು ಹಿಜಾಬ್ ತೆಗೆದರೆ ಮಾತ್ರ ಒಳಗೆ ಕರೆದು ತರಗತಿಗಳಿಗೆ ಹಾಜರಾಗುವ ಅವಕಾಶ ನೀಡುವುದಾಗಿ ಅವರಿಗೆ ಹೇಳಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗಿರುವರಾದರೂ ಅವರಿಗೂ ಶಾಲು ತೆಗೆದರೆ ಮಾತ್ರ ಪ್ರವೇಶ ಎಂದು ಹೇಳಿದಾಗ ಅವರು ಶಾಲು ತೆಗೆದು ಒಳಹೋಗಿದ್ದಾರೆ.

ಹಿಜಾಬ್ ತೆಗೆಯಲು ನಿರಾಕರಿಸಿ ಹೊರಗೆ ಕುಳಿತ ವಿದ್ಯಾರ್ಥಿನಿಯರೊಂದಿಗೆ ವರದಿಗಾರ ಮಾತಾಡಿದ್ದಾರೆ. ಅವರಲ್ಲಿ ಒಬ್ಬ ವಿದ್ಯಾರ್ಥಿನಿ ತಮಗೆ ನ್ಯಾಯ ಸಿಗುವರೆಗೆ ಹೀಗೆಯೇ ಹೋರಾಡುತ್ತೇವೆ ಅಂತ ಹೇಳುತ್ತಾಳೆ. ಹಿಜಾಬ್ ಧರಿಸಿದ್ದಕ್ಕೆ ತಮಗೆ ಒಳಗೆ ಬಿಡುತ್ತಿಲ್ಲ, ಗೇಟಿನಿಂದ ಹೊರದೂಡುತ್ತಿದ್ದಾರೆ, ತಮ್ಮನ್ನು ವಿದ್ಯಾರ್ಥಿಗಳ ಹಾಗೆ ಟ್ರೀಟ್ ಮಾಡುತ್ತಿಲ್ಲ. ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ, ಅದರ ತೀರ್ಪು ಫೆಬ್ರುವರಿ 8 ರಂದು ಹೊರಬೀಳಲಿದೆ, ಅಲ್ಲಿಯವರೆಗಾದರೂ ಕ್ಲಾಸ್​​ಗಳನ್ನು ಅಟೆಂಡ್ ಮಾಡಲು ಅವಕಾಶ ನೀಡಿ ಅಂದರೆ ನೀಡಲಿಲ್ಲ ಎಂದು ಆಕೆ ಹೇಳುತ್ತಾಳೆ.

ಹಿಜಾಬ್ ಧರಿಸದೆ ಕಾಲೇಜಿಗೆ ಬರುವಂತೆ ಹೇಳಲು ಪ್ರಿನ್ಸಿಪಾಲ ಮತ್ತು ಬೇರೆ ಉಪನ್ಯಾಸಕರು ತಮ್ಮೊಂದಿಗೆ ಒಂದು ಸಭೆ ನಡೆಸಿದ್ದರು. ಆದರೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ನಿರಾಕರಿಸಿದರು ಎಂದು ವಿದ್ಯಾರ್ಥಿನಿ ಹೇಳಿದಳು.

ಕೇವಲ ಎರಡು ತಿಂಗಳುಗಳಿಂದ ಹಿಜಾಬ್ ಗೆ ವಿರೋಧ ವ್ಯಕ್ತವಾಗುತ್ತಿದೆ. ಮೊದಲೆಲ್ಲ ತಮ್ಮ ಅಮ್ಮಂದಿರು ಅಕ್ಕಂದಿರೆಲ್ಲ ಹಿಜಾಬ್ ಧರಿಸಿಯೇ ತಮ್ಮ ಶಿಕ್ಷಣ ಪೂರೈಸಿದ್ದಾರೆ. ಆಗ ಇಲ್ಲದ ವಿರೋಧ ಈಗ ಯಾಕೆ? ಅವರೆಲ್ಲ ಓದು ಮುಗಿಸಿ ಬದುಕಿನಲ್ಲಿ ಸೆಟ್ಲ್ ಆಗಿದಾರೆ, ತಮಗ್ಯಾಕೆ ತೊಂದರೆ ಕೊಡಲಾಗುತ್ತಿದೆ. ನಮಗೆ ಶಿಕ್ಷಣವೂ ಬೇಕು ಮತ್ತು ಹಿಜಾಬ್ ಸಹ ಬೇಕು ಅನ್ನುತ್ತಾಳೆ ವಿದ್ಯಾರ್ಥಿನಿ.

ಇದನ್ನೂ ಓದಿ:   ಉಡುಪಿಯಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಬಂದಿದ್ದ ಸ್ಟೂಡೆಂಟ್ಸ್​ಗೆ ನೋ ಎಂಟ್ರಿ

Follow us on