ಶುಭ್​​ಮನ್ ಗಿಲ್ ಆಸ್ಪತ್ರೆಗೆ ದಾಖಲು..!

Updated on: Nov 16, 2025 | 9:05 AM

India vs South Africa, 1st Test: ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್​ಗಳಿಸಿ ಆಲೌಟಾದರೆ, ಟೀಮ್ ಇಂಡಿಯಾ 189 ರನ್​ಗಳಿಗೆ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತ್ತು. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ತಂಡವು ಎರಡನೇ ದಿನದಾಟದ ಅಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 93 ರನ್​ ಕಲೆಹಾಕಿದೆ.

ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಗಿಲ್ ಗಾಯಗೊಂಡಿದ್ದಾರೆ. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗಿಲ್ ಲೆಗ್ ಸೈಡ್​ನತ್ತ ಫೋರ್ ಬಾರಿಸಿದಾಗ ಕುತ್ತಿಗೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಹೊರ ನಡೆದಿದ್ದರು.

ಇದಾದ ಬಳಿಕ ವಿಪರೀತ ನೋವಿಗೆ ಒಳಗಾದ ಶುಭ್​​ಮನ್ ಗಿಲ್ ಅವರನ್ನು ಕೊಲ್ಕತ್ತಾದ ವುಡ್​ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಕುತ್ತಿಗೆ ಭಾಗದ ಸ್ನಾಯು ಸೆಳೆತದಿಂದಾಗಿ ಅವರು ತೊಂದರೆಗೆ ಸಿಲುಕಿದ್ದು, ಹೀಗಾಗಿ ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ಮೂಲಗಳು ತಿಳಿಸಿವೆ. ಅಲ್ಲದೆ ಮೂರನೇ ದಿನದಾಟದಲ್ಲಿ ಭಾರತ ತಂಡವನ್ನು ಉಪನಾಯಕ ರಿಷಭ್ ಪಂತ್ ಮುನ್ನಡೆಸಲಿದ್ದಾರೆ.

ಇನ್ನು ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್​ಗಳಿಸಿ ಆಲೌಟಾದರೆ, ಟೀಮ್ ಇಂಡಿಯಾ 189 ರನ್​ಗಳಿಗೆ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತ್ತು. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ತಂಡವು ಎರಡನೇ ದಿನದಾಟದ ಅಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 93 ರನ್​ ಕಲೆಹಾಕಿದೆ.