ಸ್ಯಾಂಡಲ್‌ವುಡ್ ನಟಿಗೆ ನಿರ್ಮಾಪಕ ಟಾರ್ಚರ್ ನೀಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ; ಪೊಲೀಸರು ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟಿಯೊಬ್ಬರು ತನಗೆ ಕಿರುಕುಳ ನೀಡಿದ ಆರೋಪದ ಮೇಲೆ, ಮಾಜಿ ಬಾಯ್‌ಫ್ರೆಂಡ್ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಗೋವಿಂದರಾಜನಗರ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮಾನಸಿಕ ಕಿರುಕುಳ, ಬ್ಲಾಕ್‌ಮೇಲ್ ಹಾಗೂ ಫೋಟೋ ಮಾರ್ಫಿಂಗ್ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ನವೆಂಬರ್ 16: ಸುಮಾರು 15-20 ದಿನಗಳ ಹಿಂದೆ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಡಲ್‌ವುಡ್ ನಟಿಯೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ನಟಿಯು ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರೊಂದಿಗೆ ಎರಡು ವರ್ಷಗಳ ಹಿಂದೆ ಸಂಬಂಧದಲ್ಲಿದ್ದರು. ನಂತರ ಆತನ ವರ್ತನೆ ಅಸಹನೀಯವಾಗಿದ್ದರಿಂದ ನಟಿ ಆತನಿಂದ ದೂರವಾಗಲು ನಿರ್ಧರಿಸಿದ್ದರು. ಆದರೆ ಆರೋಪಿಯು ನಟಿಗೆ ಮಾನಸಿಕವಾಗಿ ತೊಂದರೆ ನೀಡುವುದರ ಜೊತೆಗೆ ಆಕೆಯ ಫೋಟೋಗಳನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಬೆದರಿಕೆ ಹಾಕುತ್ತಿದ್ದ.
ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ, ಮುಂದಿನ ತನಿಖೆಯನ್ನು ಗೋವಿಂದರಾಜನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇಂದು ಬೆಳಗಿನ ಜಾವ ಶ್ರೀಲಂಕಾದಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಲುಕ್‌ಔಟ್ ಸರ್ಕ್ಯುಲರ್ ಆಧಾರದ ಮೇಲೆ ಏರ್‌ಪೋರ್ಟ್‌ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

