ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಬಿಡುಗಡೆ ಮಾಡಿದ ಬಿಸಿಸಿಐ; ವಿಡಿಯೋ ನೋಡಿ

|

Updated on: Nov 29, 2024 | 10:27 PM

Team India's New ODI Jersey Unveiled: ಬಿಸಿಸಿಐ ಟೀಮ್ ಇಂಡಿಯಾದ ಹೊಸ ಏಕದಿನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಜರ್ಮನಿಯ ಅಡಿಡಾಸ್ ಕಂಪನಿಯು ವಿನ್ಯಾಸಗೊಳಿಸಿರುವ ಈ ಜೆರ್ಸಿ ಬಿಳಿ ಬಣ್ಣದ ಅಡಿಡಾಸ್ ಪಟ್ಟಿಗಳನ್ನು ಹೊಂದಿದ್ದು, ಭುಜದ ಮೇಲೆ ತ್ರಿವರ್ಣದ ಛಾಯೆಯನ್ನು ಹೊಂದಿದೆ. ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಜೆರ್ಸಿಯನ್ನು ತೊಟ್ಟರೆ, ಪುರುಷರ ತಂಡ 2025ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈ ಜೆರ್ಸಿಯನ್ನು ಧರಿಸಿ ಆಡಲಿದೆ.

ಪ್ರಸ್ತುತ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಹಗ್ಗಜಗ್ಗಾಟ ಮುಂದುವರೆದಿದೆ. ಈ ನಡುವೆ ಬಿಸಿಸಿಐ ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿರುವ ಮಂಡಳಿಯ ಕಚೇರಿಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದರು. ಈ ವೇಳೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಉಪಸ್ಥಿತರಿದ್ದರು. ಟೀಮ್ ಇಂಡಿಯಾದ ಈ ಜೆರ್ಸಿಯನ್ನು ಜರ್ಮನಿಯ ಪ್ರಸಿದ್ಧ ಕ್ರೀಡಾ ಉಡುಪು ಕಂಪನಿ ಅಡಿಡಾಸ್ ತಯಾರಿಸಿದೆ.

ನೂತನ ಜೆರ್ಸಿಯ ವಿಶೇಷತೆ ಏನು?

ಟೀಮ್ ಇಂಡಿಯಾದ ಹಿಂದಿನ ಜೆರ್ಸಿ ಸಂಪೂರ್ಣವಾಗಿ ನೀಲಿ ಬಣ್ಣದ್ದಾಗಿತ್ತು ಮತ್ತು ಭುಜದ ಮೇಲೆ ಮೂರು ಅಡಿಡಾಸ್ ಪಟ್ಟಿಗಳನ್ನು ಹೊಂದಿತ್ತು. ವಿಶ್ವಕಪ್ ಸಮಯದಲ್ಲಿ, ಆ ಪಟ್ಟಿಗಳನ್ನು ತ್ರಿವರ್ಣದ ಬಣ್ಣಗಳಲ್ಲಿ ಚಿತ್ರಿಸಲಾಗಿತ್ತು. ಇದೀಗ ಬಿಡುಗಡೆಯಾಗಿರುವ ನೂತನ ಜೆರ್ಸಿಯಲ್ಲೂ ಭುಜಗಳ ಮೇಲೆ ಅಡೀಡಸ್‌ ಸಂಕೇತವಾಗಿರುವ ಮೂರು ಪಟ್ಟೆಗಳಿದ್ದು, ಅವುಗಳನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಇದರ ಜೊತೆಗೆ ಭುಜದ ಮೇಲೆ ತ್ರಿವರ್ಣದ ಛಾಯೆಯನ್ನು ನೀಡಲಾಗಿದೆ.

ನೂತನ ಜೆರ್ಸಿಯಲ್ಲಿ ಮೊದಲ ಪಂದ್ಯ ಯಾವಾಗ?

ಟೀಂ ಇಂಡಿಯಾ ಈ ನೂತನ ಜೆರ್ಸಿಯನ್ನು ತೊಟ್ಟು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಏಕದಿನ ಸರಣಿಯ ವೇಳೆ ಟೀಂ ಇಂಡಿಯಾ ಮೊದಲ ಬಾರಿಗೆ ಈ ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ. ಆದರೆ ಈ ಜೆರ್ಸಿ ಮಹಿಳಾ ತಂಡಕ್ಕೆ ಮಾತ್ರವಲ್ಲ, ರೋಹಿತ್ ಶರ್ಮಾ ನಾಯಕತ್ವದ ಪುರುಷರ ತಂಡವೂ ಇದನ್ನು ಧರಿಸಿ ಕಾಣಿಸಿಕೊಳ್ಳಲಿದೆ.

2025ರ ಜನವರಿಯಲ್ಲಿ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪುರುಷರ ತಂಡವು ಈ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದೆ. ನಂತರ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಇದಾದ ಬಳಿಕ ಫೆಬ್ರುವರಿ-ಮಾರ್ಚ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಂ ಇಂಡಿಯಾ ಈ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ವೇಳೆಯೂ ಟೀಂ ಇಂಡಿಯಾ ಈ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ