U19 World Cup: ಮೊದಲ ಪಂದ್ಯದಲ್ಲೇ 16 ರನ್ಗೆ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
U19 World Cup 2026: ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಯುವ ವೇಗಿ ಹೆನಿಲ್ ಪಟೇಲ್ ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬುಲವಾಯೋ ಪಿಚ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಕೇವಲ 16 ರನ್‌ಗಳಿಗೆ 5 ವಿಕೆಟ್ ಪಡೆದು ಅಮೆರಿಕಾವನ್ನು 107 ರನ್‌ಗಳಿಗೆ ಕಟ್ಟಿಹಾಕಿದರು. ಅವರ ಮಾರಕ ಬೌಲಿಂಗ್ ಭಾರತಕ್ಕೆ ಬಲ ತುಂಬಿತು, ಟೂರ್ನಿಯಲ್ಲಿ ಭರ್ಜರಿ ಆರಂಭ ದೊರೆಯಿತು.
ಅಂಡರ್-19 ವಿಶ್ವಕಪ್ ಪಂದ್ಯಾವಳಿ ಇಂದಿನಿಂದ ಆರಂಭವಾಗಿದೆ. ಭಾರತ ಯುವ ಪಡೆ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ಎದುರಾಳಿ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಯುವ ವೇಗಿ ಹೆನಿಲ್ ಪಟೇಲ್ ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದರು. ಕೇವಲ 16 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು.
ಬೌಲಿಂಗ್‌ಗೆ ಅನುಕೂಲಕರವಾದ ಬುಲವಾಯೊ ಪಿಚ್‌ನಲ್ಲಿ ವೇಗಿ ಹೆನಿಲ್ ಪಟೇಲ್ ತಮ್ಮ ಮೊದಲ ಓವರ್‌ನಲ್ಲೇ ಭೀಕರ ದಾಳಿ ನಡೆಸಿದರು. ಆರಂಭಿಕ ಅಮರಿಂದರ್ ಗಿಲ್ ಅವರನ್ನು ಔಟ್ ಮಾಡಿದ ಹೆನಿಲ್ ನಂತರ ಅರ್ಜುನ್ ಮಹೇಶ್ ಅವರ ವಿಕೆಟ್ ಪಡೆದರು. ಆ ಬಳಿಕ ಯುಎಸ್ ನಾಯಕ ಉತ್ಕರ್ಷ್ ಶ್ರೀವಾಸ್ತವ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗಟ್ಟಿದರು. ತಮ್ಮ ಮೊದಲ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಹೆನಿಲ್, 35 ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಎರಡು ವಿಕೆಟ್‌ಗಳೊಂದಿಗೆ ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.