6,4,4,4,4,6.. 22 ವರ್ಷದ ರಿತುರಾಜ್ ಅಬ್ಬರಕ್ಕೆ ದಂಗಾದ ಭುವಿ; ವಿಡಿಯೋ ನೋಡಿ
UP T20 League: ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡ ಮೀರತ್ ಮಾವೆರಿಕ್ಸ್ ವಿರುದ್ಧ ಭಾರಿ ಸೋಲು ಅನುಭವಿಸಿತು. ಮೀರತ್ ತಂಡ 233 ರನ್ ಗಳಿಸಿತು. ಲಕ್ನೋ ತಂಡದ ನಾಯಕ ಭುವನೇಶ್ವರ್ ಕುಮಾರ್ ಅವರ 19ನೇ ಓವರ್‌ನಲ್ಲಿ 29 ರನ್ ಬಿಟ್ಟುಕೊಟ್ಟು ಸೋಲಿಗೆ ಪ್ರಮುಖ ಕಾರಣರಾದರು. ರಿತುರಾಜ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ಲಕ್ನೋ ತಂಡಕ್ಕೆ ಮಾರಕವಾಯಿತು.
ಯುಪಿ ಟಿ20 ಲೀಗ್‌ನ 20 ನೇ ಪಂದ್ಯದಲ್ಲಿ, ಲಕ್ನೋ ಫಾಲ್ಕನ್ಸ್ ಹಾಗೂ ಮೀರತ್ ಮಾವೆರಿಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ ನಾಯಕತ್ವದ ಮೀರತ್ ಮಾವೆರಿಕ್ಸ್ ತಂಡ 233 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಫಾಲ್ಕನ್ಸ್ ತಂಡ 93 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ತಂಡದ ಈ ಹೀನಾಯ ಸೋಲಿಗೆ ಕಳಪೆ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ನಾಯಕ ಭುವನೇಶ್ವರ್ ಕುಮಾರ್ ಬೌಲ್ ಮಾಡಿದ ಇನ್ನಿಂಗ್ಸ್‌ನ 19ನೇ ಓವರ್ ಭಾರಿ ದುಬಾರಿ ಎನಿಸಿಕೊಂಡಿತು.
ದುಬಾರಿಯಾದ ಭುವಿ
ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಒಟ್ಟು 4 ಓವರ್ ಬೌಲಿಂಗ್ ಮಾಡಿ 49 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಭುವಿ ಬೌಲ್ ಮಾಡಿದ ಮೊದಲ 3 ಓವರ್‌ಗಳಲ್ಲಿ ಹೆಚ್ಚು ರನ್ ನೀಡಿರಲಿಲ್ಲ. ಆದರೆ ಭುವಿ ಎಸೆದ ತಮ್ಮ ಖೋಟಾದ ಕೊನೆಯ ಓವರ್‌ನಲ್ಲಿ ಬರೋಬ್ಬರಿ 29 ರನ್‌ಗಳನ್ನು ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ, ಮ್ಯಾವರಿಕ್ಸ್ ತಂಡದ ರಿತುರಾಜ್ ಶರ್ಮಾ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
ಭುವಿ ಎಸೆದ ಇನ್ನಿಂಗ್ಸ್‌ನ 19 ನೇ ಓವರ್‌ನ ಮೊದಲ ಎಸೆತದಲ್ಲೇ ರಿತುರಾಜ್ ಶರ್ಮಾ ಸಿಕ್ಸರ್ ಬಾರಿಸಿದರು. ಇದಾದ ನಂತರ, ಭುವನೇಶ್ವರ್ ಕುಮಾರ್ ವೈಡ್ ಬಾಲ್ ಎಸೆದರು. ನಂತರ ರಿತುರಾಜ್ ಶರ್ಮಾ ಒಂದರ ನಂತರ ಒಂದರಂತೆ ಸತತ 4 ಬೌಂಡರಿಗಳನ್ನು ಬಾರಿಸಿ ಕೊನೆಯ ಎಸೆತದಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭುವನೇಶ್ವರ್ ಅವರ ಓವರ್ ಅನ್ನು ತುಂಬಾ ದುಬಾರಿಯನ್ನಾಗಿ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ