62 ಎಸೆತಗಳಲ್ಲಿ 66 ರನ್, 68 ಎಸೆತಗಳಲ್ಲಿ 100 ರನ್..! ಹಾರ್ದಿಕ್ ಅಬ್ಬರ ಹೇಗಿತ್ತು ನೋಡಿ
Hardik Pandya Century: 2025ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ-ವಿದರ್ಭ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿದರು. 71 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಪಾಂಡ್ಯ 133 ರನ್ ಸಿಡಿಸಿ ಚೊಚ್ಚಲ ಲಿಸ್ಟ್ ಎ ಶತಕ ಪೂರೈಸಿದರು. ಸಹೋದರ ಕೃನಾಲ್ ಜೊತೆಗೂಡಿ 65 ರನ್‌ಗಳ ಜೊತೆಯಾಟವಾಡಿದರು. ಒಂದು ಓವರ್‌ನಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 34 ರನ್ ಚಚ್ಚಿ ಅಬ್ಬರಿಸಿದರು. ತಂಡ ಸೋತರೂ ಪಾಂಡ್ಯರ ಪ್ರದರ್ಶನ ಗಮನ ಸೆಳೆಯಿತು.
2025-26 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಮತ್ತು ವಿದರ್ಭ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬರೋಡಾ ತಂಡ ಸೋತಿತ್ತಾದರೂ ತಂಡದ ಪರ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ 71 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕಣಕ್ಕಿಳಿದ ಹಾರ್ದಿಕ್ ತಮ್ಮ ಸಹೋದರ ಕೃನಾಲ್ ಪಾಂಡ್ಯ ಅವರೊಂದಿಗೆ ಆರನೇ ವಿಕೆಟ್‌ಗೆ 65 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಇದರ ಜೊತೆಗೆ ಹಾರ್ದಿಕ್ ಪಾಂಡ್ಯ 92 ಎಸೆತಗಳಲ್ಲಿ 133 ರನ್‌ಗಳ ಇನ್ನಿಂಗ್ಸ್ ಅಡಿದರು. ಇದರಲ್ಲಿ 11 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳು ಸೇರಿದ್ದವು. 144.57 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಪಾಂಡ್ಯಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇದು ಚೊಚ್ಚಲ ಶತಕವೂ ಆಗಿತ್ತು. ಇದು ಪಾಂಡ್ಯರ ಶತಕದ ಹೈಲೇಟ್ ಆಗಿದ್ದರೆ, ಇನ್ನು ಇದೇ ಪಂದ್ಯದಲ್ಲಿ ಪಾಂಡ್ಯ ಒಂದೇ ಓವರ್‌ನಲ್ಲಿ 34 ರನ್ ಚಚ್ಚಿ ಅಬ್ಬರಿಸಿದರು.
ತಂಡದ 38 ನೇ ಓವರ್ ಮುಕ್ತಾಯಕ್ಕೆ 62 ಎಸೆತಗಳಲ್ಲಿ 66 ರನ್ ಕಲೆಹಾಕಿ ಬ್ಯಾಟಿಂಗ್ ಮುಂದುವರೆಸಿದ್ದ ಪಾಂಡ್ಯ, 39 ನೇ ಓವರ್‌ನಲ್ಲಿ ಉಗ್ರರೂಪ ತಾಳಿದರು. ಈ ಓವರ್‌ನಲ್ಲಿ ಪಾಂಡ್ಯ ಸತತ 5 ಸಿಕ್ಸರ್‌ಗಳು ಹಾಗೂ 1 ಬೌಂಡರಿ ಬಾರಿಸಿದರು. ಅಂದರೆ ಕೇವಲ 6 ಎಸೆತಗಳಲ್ಲಿ 34 ರನ್ ಕಲೆಹಾಕಿದ ಪಾಂಡ್ಯ ತಮ್ಮ ಶತಕವನ್ನು ಪೂರೈಸಿದರು.

