Viral Video: “ನೀವು ಜಗತ್ತು ಗೆಲ್ಲುತ್ತೀರಿ”: ಭಾವುಕರಾಗಿ ಮೋದಿ ಭಾವಚಿತ್ರಕ್ಕೆ ಮುತ್ತಿಟ್ಟ ರೈತ

|

Updated on: Mar 30, 2023 | 7:22 PM

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಕಂಡ ಕೂಡಲೇ ಭಾವುರಾದ ರೈತರೊಬ್ಬರು ನೀವು ಜಗತ್ತನ್ನು ಗೆಲ್ಲುತ್ತೀರಿ ಎಂದು ಹೇಳಿ ಮುತ್ತು ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಭಿಮಾನಿಗಳ ಸಂಖ್ಯೆಗೇನು ಕಡಿಮೆ ಇಲ್ಲ. ಅವರು ಪ್ರಧಾನಿಯಾದ ನಂತರ ಕೈಗೊಂಡ ಯೋಜನೆಗಳು, ಪ್ರಮುಖ ನಿರ್ಧಾರಗಳಿಂದಾಗಿ ದೇಶ ವಿದೇಶಗಳಲ್ಲೂ ಜನಮನ ಗೆದ್ದಿದ್ದಾರೆ. ಅದೇ ರೀತಿ ರೈತರ ವಿಚಾರದಲ್ಲೂ ಕಾಳಜಿ ವಹಿಸಿದ್ದಾರೆ. ಇದಕ್ಕೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಉದಾಹರಣೆ. ಇದೇ ಕಾರಣಕ್ಕೆ ಒಂದಷ್ಟು ರೈತರು ಮೋದಿ ಆಡಳಿತದ ಪರ ಇದ್ದಾರೆ. ಇದೀಗ ರೈತರೊಬ್ಬರು ಮೋದಿಯ ಭಾವಚಿತ್ರ ನೋಡಿ ನೀವು ಜಗತ್ತನ್ನು ಗೆಲ್ಲುತ್ತೀರಿ ಎಂದು ಭಾವುಕರಾಗಿ ಹೇಳಿ ಮುತ್ತಿಟ್ಟಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral  Video) ಆಗುತ್ತಿದೆ.

ವೈರಲ್ ವೀಡಿಯೋದಲ್ಲಿ ಇರುವಂತೆ ಪ್ರಧಾನಿಯವರ ಚಿತ್ರದೊಂದಿಗೆ ಮಾತನಾಡುವಾಗ ರೈತ ಭಾವುಕರಾಗುವುದನ್ನು ಕಾಣಬಹುದು. “ಮೊದಲು ನನಗೆ 1,000 ಸಿಗುತ್ತಿತ್ತು ಮತ್ತು ನೀವು ಇನ್ನೂ 500 ಕೊಡಲು ನಿರ್ಧರಿಸಿದ್ದೀರಿ. ನಮ್ಮ ಮನೆಗಳು ಹಸಿರಾಗಿರಬೇಕು ಎಂದು ನೀವು ಹೇಳಿದ್ದೀರಿ. ನಮ್ಮ ಆರೋಗ್ಯಕ್ಕಾಗಿ 5 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದೀರಿ. ನಾನು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ, ನೀವು ಜಗತ್ತು ಗೆಲ್ಲುತ್ತೀರಿ” ಎಂದು ಭಾವುಕರಾಗಿ ಭಾವಚಿತ್ರವನ್ನು ಸವರಿ ಕೆನ್ನೆಗೆ ಮುತ್ತಿಟ್ಟಿದ್ದಾರೆ.

ಇದನ್ನೂ ಓದಿ: Amit Shah: ಅಂದು ಮೋದಿ ಹೆಸರು ಹೇಳುವಂತೆ ಸಿಬಿಐ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹಾಕಿದ್ದರು: ಅಮಿತ್ ಶಾ

ಈ ವಿಡಿಯೋವನ್ನು ಮೋಹನ್​ದಾಸ್ ಕಾಮತ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕರ್ನಾಟಕದ ರೈತರೊಬ್ಬರು ಮೋದಿ ಬಗ್ಗೆ ಅವರ ಆಳವಾದ ಪ್ರೀತಿಯನ್ನು ತೋರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ನಿನ್ನೆ (ಮಾರ್ಚ್ 29 ರಂದು) ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಈವರೆಗೆ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ವಿಡಿಯೋ ನೋಡಿದ ಒಂದಷ್ಟು ನೆಟ್ಟಿಗರು ರೈತನ ಪ್ರೀತಿಯನ್ನು ಹಾಗೂ ಮೋದಿಯವರನ್ನು ಹೊಗಳಿದ್ದಾರೆ.

ಪ್ರಧಾನಿ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ವರ್ಷಕ್ಕೆ 6 ಸಾವಿರ ರೂ. ಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಆ ಮೂಲಕ ರೈತರಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಅದಾಗ್ಯೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ಕೃಷಿ ಕಾಯ್ದೆಗಳಿಗೆ ರೈತರಿಂದ ಭಾರೀ ವಿರೋಧಗಳು ವ್ಯಕ್ತವಾಗಿದ್ದರೂ ಒಂದಷ್ಟು ಸಂಖ್ಯೆ ರೈತರು ಕಾಯ್ದೆಗಳನ್ನು ಬೆಂಬಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Thu, 30 March 23