IND vs AUS: ಕಣ್ಮುಚ್ಚಿ ಬಿಡುವುದರಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ಕಿಂಗ್ ಕೊಹ್ಲಿ; ವಿಡಿಯೋ
Virat Kohli's Stunning Catch: ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್‌ನಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಕೊಹ್ಲಿ, ಫಿಲ್ಡಿಂಗ್‌ನಲ್ಲಿ ಮ್ಯಾಥ್ಯೂ ಶಾರ್ಟ್ ವಿಕೆಟ್ ಪಡೆದು ಮಿಂಚಿದ್ದಾರೆ. ಅವರ ಅದ್ಭುತ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಆ ಮೂಲಕ ಅವರು ತಂಡಕ್ಕೆ ಪ್ರಮುಖ ಬ್ರೇಕ್‌ಥ್ರೂ ನೀಡಿದ್ದಾರೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯದ ಓವರ್‌ಗಳಲ್ಲಿ ತಂಡದ ಇನ್ನಿಂಗ್ಸ್ ಕುಸಿಯಿತು. ಇದೇ ವೇಳೆ ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ, ಫಿಲ್ಡಿಂಗ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಕಳೆದ ಪಂದ್ಯದಲ್ಲಿ ಆಸೀಸ್ ಗೆಲುವಿನ ಹೀರೋ ಎನಿಸಿಕೊಂಡಿದ್ದ ಮ್ಯಾಥ್ಯೂ ಶಾರ್ಟ್ ಅವರ ವಿಕೆಟ್ ಉರುಳಿಸಿದರು.
ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ 22 ನೇ ಓವರ್‌ನ ಮೂರನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಮ್ಯಾಥ್ಯೂ ಶಾರ್ಟ್ ಅವರನ್ನು ಔಟ್ ಮಾಡಿದರು. ಶಾರ್ಟ್, ಸ್ಕ್ವೇರ್ ಲೆಗ್ ಕಡೆಗೆ ಸ್ವೀಪ್ ಶಾಟ್ ಆಡಿದರು. ಚೆಂಡು ವೇಗವಾಗಿ ಬೌಂಡರಿಯತ್ತ ಹೋಗುತ್ತಿತ್ತು. ಆದರೆ ಅಲ್ಲಿಯೇ ನಿಂತಿದ್ದ ವಿರಾಟ್ ಕೊಹ್ಲಿ ತಮ್ಮ ಎರಡೂ ಕೈಗಳಿಂದ ಚೆಂಡನ್ನು ಹಿಡಿದರು. ಚೆಂಡಿನ ವೇಗ ಎಷ್ಟು ಹೆಚ್ಚಾಗಿತ್ತೆಂದರೆ ವಿರಾಟ್ ಅದನ್ನು ಹಿಡಿದಾಗ ನೆಲಕ್ಕೆ ಬಿದ್ದರು. ಇದೀಗ ವಿರಾಟ್ ಹಿಡಿದ ಕ್ಯಾಚ್‌ನ ವಿಡಿಯೋ ಸೋಶಿಯಲ್ ಮೀಡಿಯಾದ ವೈರಲ್ ಆಗುತ್ತಿದೆ.
ಇದೀಗ ಫಿಲ್ಡಿಂಗ್‌ನಲ್ಲಿ ಕಮಾಲ್ ಮಾಡಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿಯೂ ತಮ್ಮ ಪರಾಕ್ರಮವನ್ನು ತೋರಿಸಬೇಕಾಗಿದೆ. ಈ ಸರಣಿಯಲ್ಲಿ ಅವರು ಇನ್ನೂ ತಮ್ಮ ಖಾತೆಯನ್ನು ತೆರೆಯದಿರುವುದು ಗಮನಿಸಬೇಕಾದ ಸಂಗತಿ. ಅಡಿಲೇಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ 8 ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆ ಬಳಿಕ ಅಡಿಲೇಡ್‌ನಲ್ಲಿ 4 ಎಸೆತಗಳನ್ನು ಎದುರಿಸಿ ಒಂದೇ ಒಂದು ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ