18 ಸಿಕ್ಸ್, 181 ರನ್​… ಕೆಸಿಎಲ್​ನಲ್ಲಿ ವಿಷ್ಣು ವಿನೋದ್ ಆರ್ಭಟ

Updated on: Aug 26, 2025 | 9:54 AM

Vishnu Vinod: ವಿಶೇಷ ಎಂದರೆ ಕಳೆದ ಎರಡು ಪಂದ್ಯಗಳಿಂದ ವಿಷ್ಣು ವಿನೋದ್ ಸಿಡಿಸಿರುವ ಸಿಕ್ಸ್​ಗಳ ಸಂಖ್ಯೆ ಬರೋಬ್ಬರಿ 18. ಅಲ್ಲದೆ ಬ್ಯಾಕ್ ಟು ಬ್ಯಾಕ್ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ಒಟ್ಟು 181 ರನ್​ ಕಲೆಹಾಕಿದ್ದಾರೆ. ಈ ಮೂಲಕ ಕೇರಳ ಪ್ರೀಮಿಯರ್ ಲೀಗ್​ನಲ್ಲಿ ವಿಷ್ಣು ವಿನೋದ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಕೇರಳ ಕ್ರಿಕೆಟ್ ಲೀಗ್​ನಲ್ಲಿ ವಿಷ್ಣು ವಿನೋದ್ ಆರ್ಭಟ ಮುಂದುವರೆದಿದೆ. ಕೊಚ್ಚಿ ಬ್ಲೂ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್​ಗಳೊಂದಿಗೆ 94 ರನ್ ಬಾರಿಸಿದ್ದ ವಿನೋದ್ ಇದೀಗ 9ನೇ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ತಿರುವನಂತಪುರದ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಲಂ ಸೈಲರ್ಸ್ ಹಾಗೂ ತ್ರಿಶ್ಶೂರ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸಚಿನ್ ಬೇಬಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿ ತ್ರಿಶ್ಶೂರ್ ಟೈಟಾನ್ಸ್ ತಂಡವು 19.5 ಓವರ್​ಗಳಲ್ಲಿ 144 ರನ್​ಗಳಿಸಿ ಆಲೌಟ್ ಆಯಿತು.

145 ರನ್​ಗಳ ಸುಲಭ ಗುರಿ ಬೆನ್ನತ್ತಿದ ಕೊಲ್ಲಂ ಸೈಲರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವಿಷ್ಣು ವಿನೋದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ವಿಷ್ಣು 38 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 86 ರನ್ ಬಾರಿಸಿದರು.

ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಕೊಲ್ಲಂ ಸೈಲರ್ಸ್ ತಂಡವು 14.1 ಓವರ್​ಗಳಲ್ಲಿ 150 ರನ್​ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಬ್ಯಾಟಿಂಗ್ ಪರಾಕ್ರಮ ಮೆರೆದ ವಿಷ್ಣು ವಿನೋದ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ವಿಶೇಷ ಎಂದರೆ ಕಳೆದ ಎರಡು ಪಂದ್ಯಗಳಿಂದ ವಿಷ್ಣು ವಿನೋದ್ ಸಿಡಿಸಿರುವ ಸಿಕ್ಸ್​ಗಳ ಸಂಖ್ಯೆ ಬರೋಬ್ಬರಿ 18. ಅಲ್ಲದೆ ಬ್ಯಾಕ್ ಟು ಬ್ಯಾಕ್ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ಒಟ್ಟು 181 ರನ್​ ಕಲೆಹಾಕಿದ್ದಾರೆ. ಈ ಮೂಲಕ ಕೇರಳ ಪ್ರೀಮಿಯರ್ ಲೀಗ್​ನಲ್ಲಿ ವಿಷ್ಣು ವಿನೋದ್ ಹೊಸ ಸಂಚಲನ ಸೃಷ್ಟಿಸಿದ್ದಾರೆ.