ಹಣದುಬ್ಬರ ಹಾಗೂ ಠೇವಣಿ ಮೇಲೆ ಕಡಿಮೆಗೊಳ್ಳುತ್ತಿರುವ ಬಡ್ಡಿದರದ ಬಗ್ಗೆ ಭಯವಿರಬೇಕು: ಡಾ ಬಾಲಾಜಿ ರಾವ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 05, 2021 | 4:17 PM

ಭಾರತದಲ್ಲಿ ಈಗ ಶೇಕಡ 5 ರಷ್ಟು ಬಡ್ಡಿ ಸಿಗುತ್ತಿದೆ, ಅದರೆ 1995 ರಲ್ಲಿ ನಮ್ಮ ಫಿಕ್ಸೆಡ್ ಡಿಪಾಸಿಟ್ ಮೇಲೆ ಶೇ. 14 ಬಡ್ಡಿ ಸಿಗುತ್ತಿತ್ತು ಎನ್ನುತ್ತಾರೆ ಡಾ ರಾವ್.

ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೊದಲು ನಮ್ಮ ತಿಳುವಳಿಕೆ ಹೇಗಿರಬೇಕು, ಧೋರಣೆ ಹೇಗಿರಬೇಕು ಅನ್ನವುದನ್ನು ಕೆಲವು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ಭಾರತದ ಖ್ಯಾತ ಹೂಡಿಕೆ ತಜ್ಞರು ತಮ್ಮ ಹಣವನ್ನು ಯಾವುದಾದರೂ ಕಂಪನಿಯ ಷೇರುಗಳಲ್ಲಿ ಹೂಡುವ ಮೊದಲು ಆ ಕಂಪನಿಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸುತ್ತಾರೆ ಎಂದು ಡಾ ರಾವ್ ಹೇಳುತ್ತಾರೆ. ಒಂದು ನಿರ್ದಿಷ್ಟ ಕಂಪನಿಯು ಮುಂಬರುವ ವರ್ಷಗಳಲ್ಲಿ ಭಾರಿ ಪ್ರಗತಿ ಹೊಂದಲಿದೆ ಅಂತ ಮನವರಿಕೆಯಾದ ನಂತರವೇ ಅವರು ಹಣ ಹೂಡಲು ಮುಂದಾಗುತ್ತಾರೆ. ಹೂಡಿಕೆ ಯಾವತ್ತೂ ಕಾಟಾಚಾರಕ್ಕೆ ಮಾಡಬಾರದು. ಅದರಿಂದ ಸಂಪತ್ತು ಗಳಿಸುವ ಗಟ್ಟಿ ಇರಾದೆ ನಮ್ಮಲ್ಲಿರಬೇಕು ಎಂದು ಅವರು ಹೇಳುತ್ತಾರೆ. ಸಂಶೋಧನೆಯಿಂದ ನಮ್ಮ ತಿಳುವಳಿಕೆ ಹೆಚ್ಚುತ್ತದೆ ಮತ್ತು ಅದನ್ನು ಬಹಳ ಎಚ್ಚರಿಕೆಯಿಂದ ಉಪಯೋಗಿಸಿಕೊಳ್ಳಬೇಕು.

ಹೂಡಿಕೆ ಮಾಡಲು ನಿರ್ಧರಿಸುವ ಮೊದಲು ನಮ್ಮ ಮನಸ್ಸಿನಲ್ಲಿರುವ ಭಯವನ್ನು ತೆಗೆದು ಹಾಕಬೇಕೆಂದು ರಾವ್ ಹೇಳುತ್ತಾರೆ. ನಾವು ಇತರ ಆಯಾಮಗಳು ಅಂದರೆ, ಹಣದುಬ್ಬರ ಮತ್ತು ನಿಶ್ಚಿತ ಠೇವಣಿಗಳ ಮೇಲೆ ದಿನೇದಿನೆ ಕಡಿಮೆಯಾಗುತ್ತಿರುವ ಬಡ್ಡಿದರದ ಬಗ್ಗೆ ಭಯಪಡಬೇಕು ಮತ್ತು ಹೂಡಿಕೆಗೆ ಪರ್ಯಾಯ ಷೇರು ಮಾರುಕಟ್ಟೆ ಅನ್ನೋದನ್ನು ಅರಿತುಕೊಳ್ಳಬೇಕು. ಹಲವಾರು ದೇಶಗಳಲ್ಲಿ ಗ್ರಾಹಕರು ಬ್ಯಾಂಕ್ನಲ್ಲಿ ಹಣ ಹೂಡಿದರೆ, ಬಡ್ಡಿಯೇ ಕೊಡುವುದಿಲ್ಲವಂತೆ.

ಬ್ರಿಟನ್​ನಲ್ಲಿ 10,000 ರೂ. ಬ್ಯಾಂಕ್ನಲ್ಲಿ ಹೂಡಿದರೆ ಒಂದು ವರ್ಷದ ಬಳಿಕ ರೂ.10 ಬಡ್ಡಿ ಸಿಗುತ್ತದೆ ಅಂತ ರಾವ್ ಹೇಳುತ್ತಾರೆ. ಕೆಲ ರಾಷ್ಟ್ರಗಳಲ್ಲಂತೂ ನೆಗೆಟಿವ್ ಬಡ್ಡಿದರ ಇದ್ದು ಅಲ್ಲಿ ಗ್ರಾಹಕರೇ ತಮ್ಮ ಹಣ ಇಟ್ಟುಕೊಳ್ಳಲು ಬ್ಯಾಂಕ್ಗಳಿಗೆ ಪ್ರತ್ಯೇಕವಾಗಿ ಹಣ ನೀಡಬೇಕು.

ಭಾರತದಲ್ಲಿ ಈಗ ಶೇಕಡ 5 ರಷ್ಟು ಬಡ್ಡಿ ಸಿಗುತ್ತಿದೆ, ಅದರೆ 1995 ರಲ್ಲಿ ನಮ್ಮ ಫಿಕ್ಸೆಡ್ ಡಿಪಾಸಿಟ್ ಮೇಲೆ ಶೇ. 14 ಬಡ್ಡಿ ಸಿಗುತ್ತಿತ್ತು ಎನ್ನುತ್ತಾರೆ ಡಾ ರಾವ್.

ಈ ಹಿನ್ನೆಲೆಯಲ್ಲಿ ಹೂಡಿಕೆ ಪರ್ಯಾಯವೆಂದರೆ, ಷೇರು ಮಾರುಕಟ್ಟೆ ಎನ್ನುವುದು ನಮಗೆ ಅರ್ಥವಾಗಬೇಕು. ಆದರೆ, ಇಲ್ಲಿ ಹಣ ಹೂಡಬೇಕಾದರೆ ನಮ್ಮಲ್ಲಿ ಸಣ್ಣ ಯೋಚನೆಗಳು, ಅಲ್ಪತೃಪ್ತಿ ಪ್ತವೃತ್ತಿ ಇರಬಾರದು ಎಂದು ಡಾ ರಾವ್ ಹೇಳುತ್ತಾರೆ.

ನಮ್ಮ ಹಣ ಒಂದೆರಡು ವರ್ಷಗಳಲ್ಲಿ ಡಬಲ್ ಆಗುತ್ತದೆ ಎನ್ನುವ ಧೋರಣೆ ಸಲ್ಲದು ಎಂದು ಹೇಳುವ ರಾವ್, ದೊಡ್ಡ ಕಂಪನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದರೆ, ರಿಟರ್ನ್ಸ್ ಸಹ ಚೆನ್ನಾಗಿರುತ್ತವೆ ಎನ್ನುತ್ತಾರೆ.

ಇದನ್ನೂ ಓದಿ:  ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹರಿಸಿದ ದೃಶ್ಯ ಮೊಬೈಲ್​ನಲ್ಲಿ ಸೆರೆ; ವಿಡಿಯೋ ನೋಡಿ