‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು
ಪುನೀತ್ ರಾಜ್ಕುಮಾರ್ ನಿಧನದಿಂದ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ. ಅ.29 ಎಂಬುದು ಇಡೀ ಕರುನಾಡಿನ ಪಾಲಿಗೆ ಕರಾಳ ದಿನ. ಅಂದು ಆದ ಸಂಕಟವನ್ನು ಶಿವರಾಜ್ಕುಮಾರ್ ಅವರು ವಿವರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಮೊದಲ ಬಾರಿಗೆ ಕೇಳಿದಾಗ ಇಡೀ ಕರುನಾಡಿಗೆ ಆಘಾತ ಆಗಿತ್ತು. ಅವರ ಕುಟುಂಬಕ್ಕೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಂದು (ಅ.29) ಬೆಳಗ್ಗೆ ಶಿವಣ್ಣ ನಟಿಸಿದ್ದ ‘ಭಜರಂಗಿ 2’ ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿತ್ತು. ಆ ಖುಷಿಯ ಮಧ್ಯೆಯೇ ಅಪ್ಪು ನಿಧನದ ಸುದ್ದಿ ಸಿಡಿಲಿನಂತೆ ಬಂದೆರಗಿತ್ತು. ಆದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಶಿವರಾಜ್ಕುಮಾರ್ ವಿವರಿಸಿದ್ದಾರೆ. ಟಿವಿ9 ನಡೆಸಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಶಿವಣ್ಣ ಹಂಚಿಕೊಂಡಿದ್ದಾರೆ. ಸಹೋದರನ ಅಗಲಿಕೆಯ ನೋವನ್ನು ಅವರು ತೋಡಿಕೊಂಡಿದ್ದಾರೆ.
‘ಮೊದಲ ಬಾರಿಗೆ ಆ ಸುದ್ದಿ ಕೇಳಿದಾಗ ನನಗೆ ಮೈಯಲ್ಲಿ ನಡುಕು ಬಂತು. ಫೋನ್ ತೆಗೆದು ಎಸೆದು, ಕೆಳಗೆ ಕುಳಿತುಕೊಂಡುಬಿಟ್ಟೆ. ನನ್ನ ತಮ್ಮನಿಗೆ ಯಾಕೆ ಹೀಗೆ ಆಯ್ತು? ಸಂಪೂರ್ಣ ಬ್ಲಾಂಕ್ ಆದೆ. ತೀವ್ರವಾಗಿ ಕೋಪ ಬರುತ್ತಿತ್ತು. ಎಲ್ಲರಿಗೂ ಬಯ್ಯುತ್ತಿದ್ದೆ. ದೊಡ್ಡ ಒಂದು ರಾಡ್ ತೆಗೆದುಕೊಂಡು ತಲೆಗೆ ಹೊಡೆದರೆ ಹೇಗೆ ಆಗುತ್ತೋ ಆ ರೀತಿ ನೋವು ಆಯಿತು. ಸಾಮಾನ್ಯವಾಗಿ ನಾನೇ ಗಾಡಿ ಓಡಿಸುತ್ತೇನೆ. ಅಂದು ನಾನು ಗಾಡಿ ಓಡಿಸುವುದಿಲ್ಲ ಅಂತ ಹೇಳಿ ಹಿಂದಿನ ಸೀಟ್ನಲ್ಲಿ ಕುಳಿತೆ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್ ನಿಧನದ ಬಳಿಕ ಜಿಮ್ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ
ಸಕ್ರೆಬೈಲು ಆನೆ ಮರಿಗೆ ಪುನೀತ್ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ