ಅಲ್ತಾಫ್ ದುರ್ಮರಣದಿಂದ ಕಂಗೆಟ್ಟಿರುವ ಅವರ ಪತ್ನಿ ಜುಬೇರಿಯಾ ರಾಷ್ಟ್ರಧ್ವಜ ಸ್ವೀಕರಿಸುವಾಗ ಕುಸಿದುಬಿದ್ದರು

ಅಲ್ತಾಫ್ ದುರ್ಮರಣದಿಂದ ಕಂಗೆಟ್ಟಿರುವ ಅವರ ಪತ್ನಿ ಜುಬೇರಿಯಾ ರಾಷ್ಟ್ರಧ್ವಜ ಸ್ವೀಕರಿಸುವಾಗ ಕುಸಿದುಬಿದ್ದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 26, 2022 | 4:28 PM

ಅಂತಿಮ ವಿಧಿವಿಧಾನಗಳ ಭಾಗವಾಗಿ ಅಲ್ತಾಫ್ ಅವರ ದೇಹಕ್ಕೆ ಸುತ್ತಲಾಗಿದ್ದ ತಿರಂಗವನ್ನು ಅವರ ಪತ್ನಿ ಜುಬೇರಿಯಾ ಅವರಿಗೆ ಹಸ್ತಾಂತರಿಸುವಾಗ ನಾಲ್ಕು ದಿನಗಳ ಊಟ ನೀರಲ್ಲದೆ, ಅತ್ತು ಅತ್ತು ಬಸವಳಿದಿದ್ದ ಜುಬೇರಿಯಾ ಅವರು ಕುಸಿದುಬಿದ್ದರು.

ಬುಧವಾರದಂದು ಶ್ರೀನಗರದಲ್ಲಿ ಹಿಮಪಾತದೊಳಗೆ ಸಿಲುಕಿ ದಾರುಣ ಸಾವನ್ನಪ್ಪಿದ ಕೊಡಗಿನ ವೀರ ಯೋಧ ಅಲ್ತಾಫ್ (Altaf) ಅವರಿಗೆ ಶನಿವಾರ ಅವರ ತವರೂರು ವಿರಾಜಪೇಟೆಯಲ್ಲಿ (Virajpet) ಸಕಲ ಸರ್ಕಾರೀ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಂತಿಮ ವಿಧಿವಿಧಾನಗಳ ಭಾಗವಾಗಿ ಅಲ್ತಾಫ್ ಅವರ ದೇಹಕ್ಕೆ ಸುತ್ತಲಾಗಿದ್ದ ತಿರಂಗವನ್ನು ಅವರ ಪತ್ನಿ ಜುಬೇರಿಯಾ (Zuberiya) ಅವರಿಗೆ ಹಸ್ತಾಂತರಿಸುವಾಗ ನಾಲ್ಕು ದಿನಗಳ ಊಟ ನೀರಲ್ಲದೆ, ಅತ್ತು ಅತ್ತು ಬಸವಳಿದಿದ್ದ ಜುಬೇರಿಯಾ ಅವರು ಕುಸಿದುಬಿದ್ದರು. ಈ ಮನ ಕಲಕುವ ದೃಶ್ಯ ನೋಡಿ ಅಲ್ಲಿ ನೆರೆದಿದ್ದ ಜನರೆಲ್ಲರ ಕಣ್ಣಾಲಿಗಳು ತುಂಬಿಬಂದಿದ್ದವು. ಅಲ್ತಾಫ್ ಅವರ ದೇಹವನ್ನು ಮುಸ್ಲಿಂ ಸಂಪ್ರದಾಯದಂತೆ ಮಣ್ಣಲ್ಲಿ ಹೂಣುವ ಮೊದಲು ಜುಬೇರಿಯಾ ಪತಿಯ ಮುಖ ನೋಡುತ್ತಾ ಏನೋ ಹೇಳುತ್ತಾ ಅಂತಿಮ ವಿದಾಯ ಹೇಳುತ್ತಿದ್ದ ದೃಶ್ಯ ಕೂಡ ಹೃದಯ ವಿದ್ರಾವಕವಾಗಿತ್ತು.

ಅಲ್ತಾಫ್ ಅವರ ಮಗನಿಗೆ ಏನು ನಡೆಯುತ್ತಿದೆ ಅಂತ ಪ್ರಾಯಶಃ ಗೊತ್ತಾಗಿಲ್ಲ. 8 ವರ್ಷದವನಿರಬಹುದಾದ ಅವನು ಕೊನೆಯ ಬಾರಿ ತಂದೆಯ ಮುಖ ನೋಡಲು ಸಹ ತಯಾರಿಲ್ಲ. ಇನ್ಯಾವತ್ತೂ ಎದ್ದೇಳದ ಅಪ್ಪನ ಮುಖವನ್ನು ನೋಡದಿರುವಷ್ಟು ದುಃಖ ಈ ಎಳೆಯ ಮಗುವಿನಲ್ಲಿ ಮಡುಗಟ್ಟಿರಬಹುದು.

21 ಸುತ್ತು ಕುಶಾಲತೋಪು ಸಿಡಿಸಿ ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ವೀರಯೋಧನಿಗೆ ಗೌರವ ಸಲ್ಲಿಸುವಾಗ ಕುಟುಂಬಸ್ಥರು ಅನಿಯಂತ್ರಿತವಾಗಿ ರೋದಿಸುತ್ತಿದ್ದರು.

ಇದನ್ನು ವಿಧಿಯಾಟ ಅನ್ನಬೇಕೋ ಅಥವಾ ಬೇರೆ ಏನು ಹೇಳಬೇಕೋ ಅಂತ ಅರ್ಥವಾಗದು ಮಾರಾಯ್ರೇ. ಅಲ್ತಾಫ್ ತಮ್ಮ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ವಾಪಸ್ಸಾಗಿದ್ದರು. ಅದರೆ ಇನ್ನೂ ದೇಶಸೇವೆ ಮಾಡಬೇಕೆನ್ನುವ ತುಡಿತ ಅವರನ್ನು ಮತ್ತೊಮ್ಮೆ ಸೇನೆಗೆ ಸೇರುವಂತೆ ಪ್ರೇರೇಪಿಸಿತ್ತು.

ಅವರ ಅಂತ್ಯ ಹೀಗಾಗುತ್ತೆ ಅಂತ ಯಾರು ನೆನೆಸಿದ್ದರು?

ಇದನ್ನೂ ಓದಿ:  ಹಿಮಪಾತದಲ್ಲಿ ದುರ್ಮರಣಕ್ಕೀಡಾದ ಕೊಡಗಿನ ಯೋಧ ಅಲ್ತಾಫ್ ಪ್ರೇಮಿಗಳ ದಿನ‌, ಹಿಜಾಬ್​ ಬಗ್ಗೆ ಏನು ಹೇಳಿದ್ದರು? Viral Audio