ಅಧಿಕಾರದ ಬೆನ್ನೇರಿ ಬಾಂಬೆ ಟೀಮ್ನ 17 ಶಾಸಕರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಾರಾ? ಮುಖ್ಯವಾಗಿ ಮುನಿರತ್ನ ಏನಂದರು?
ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಅಂದರೆ ಜೈಲಿಗೆ ಹೋಗಲು ಸಿದ್ಧ. ನನಗೆ ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಡಿ.ಕೆ.ಶಿವಕುಮಾರ್ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ. ನನ್ನನ್ನು ಜೈಲಿನಲ್ಲಿ ಇಟ್ಟು ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ. ಮುಂದಿನ ಐದೂ ವರ್ಷ ಬೇಕಾದರೂ ನಾನು ಜೈಲಿನಲ್ಲಿರಲು ಸಿದ್ಧವಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆರ್.ಆರ್. ನಗರ ಶಾಸಕ ಮುನಿರತ್ನ ತಿರುಗೇಟು ನೀಡಿದರು.
ಬೆಂಗಳೂರು, ಆಗಸ್ಟ್ 16: ಮುಖ್ಯವಾಗಿ ಅಧಿಕಾರದ ಬೆನ್ನೇರಿ ಬಿಜೆಪಿಗೆ ಹಾರಿ ಬಂದಿದ್ದ ಬಾಂಬೆ ಟೀಂನ 17 ಶಾಸಕರು (17 Bombay Boys team) ಇದೀಗ ಮತ್ತೆ ಅದೇ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಇದಕ್ಕೆ ಮುಖ್ಯವಾಗಿ ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ (RR nagar BJP MLA) ಆರ್ ಮುನಿರತ್ನ ಅವರು ಅವರದೆ ಮಾತಿನಲ್ಲಿ ಹೇಳುವಂತೆ ಬಹಳ ಸ್ಪಷ್ಟವಾದ ಉತ್ತರ ನೀಡಿದರು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬೆಂಗಳೂರು ನಗರದ 28 ಕ್ಷೇತ್ರಗಳಿಗೆ ಮುಖ್ಯಸ್ಥರು. ಬೆಂಗಳೂರು ವ್ಯಾಪ್ತಿಯ ಶಾಸಕರು ಅವರನ್ನ ಭೇಟಿಯಾಗುವುದು ಸಾಮಾನ್ಯ. ಸನ್ಮಾನ್ಯ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ರಾಜಧಾನಿ ಶಾಸಕರುಗಳಿಗೆ ಉತ್ತರ ಕೊಡುತ್ತಾರಾ? ಅಥವಾ ಬೆಂಗಳೂರಿನ ಸಚಿವರಾಗಿ ಉತ್ತರ ಕೊಡುತ್ತಾರಾ ಎಂಬ ಗೊಂದಲ ಆಗುತ್ತಿದೆ. ಯಾರಾದರೂ ಅವರ ಮನೆಗೆ ಹಿಂಬಾಗಿಲಿನಿಂದ ಹೋಗಿದ್ದಾರಾ? ಅಥವಾ ಬುರ್ಖಾ ಹಾಕಿಕೊಂಡು ಹೋಗಿದ್ದಾರಾ? ಎಂದು ಮುನಿರತ್ನ ಖಾರವಾಗಿ ಪ್ರಶ್ನಿಸಿದ್ದಾರೆ. ಮೊದಲು ಡಿಕೆಶಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಶಾಸಕರನ್ನು ಕರೆಯಲಿ. ಮೊದಲು ಅವರ ಪಕ್ಷದ ಶಾಸಕರಿಗೆ ಅನುದಾನ ಕೊಡಲಿ, ನಂತರ ನಮಗೆ ಕೊಡಲಿ ಎಂದು ಬೆಂಗಳೂರಿನಲ್ಲಿ ಆರ್.ಆರ್. ನಗರ ಶಾಸಕ ಮುನಿರತ್ನ ಮಾರ್ಮಿಕವಾಗಿ ಹೇಳಿದರು.
ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಅಂದರೆ ಜೈಲಿಗೆ ಹೋಗಲು ಸಿದ್ಧ. ನನಗೆ ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಮುಖ್ಯ ಡಿ.ಕೆ.ಶಿವಕುಮಾರ್ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ. ನನ್ನನ್ನು ಜೈಲಿನಲ್ಲಿ ಇಟ್ಟು ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ. ಮುಂದಿನ ಐದೂ ವರ್ಷ ಬೇಕಾದರೂ ನಾನು ಜೈಲಿನಲ್ಲಿರಲು ಸಿದ್ಧವಾಗಿದ್ದೇನೆ ಎಂದು ಆರ್.ಆರ್. ನಗರ ಶಾಸಕ ಮುನಿರತ್ನ ಹೇಳಿದರು.
ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆಂಬ ವಿಚಾರ ಪ್ರಸ್ತಾಪಿಸಿದ ಶಾಸಕ ಮುನಿರತ್ನ ಅವರು ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. 17 ಜನರಲ್ಲಿ ಯಾರು ಕಾಂಗ್ರೆಸ್ಗೆ ಹೋಗುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಅಗತ್ಯ ಬಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗುವುದಿಲ್ಲ. ಇದು ನನ್ನ ಸ್ಪಷ್ಟ ಉತ್ತರ ಎಂದು ಮುನಿರತ್ನ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ