
[lazy-load-videos-and-sticky-control id=”cvXGnUyOkgs”]
ಕೊರೊನಾ ಸಂಕಷ್ಟದ ಸಮಯದಲ್ಲಿ ಶಾಲೆ ಕಾಲೇಜುಗಳು ಆನ್‌ಲೈನ್ ಕ್ಲಾಸ್ ಆರಂಭಿಸಿವೆ. ಹೀಗಾಗಿ ಮಗಳ ಆನ್‌ಲೈನ್ ಕ್ಲಾಸ್‌ಗೆ ಅಗತ್ಯವಿರುವ ಮೊಬೈಲ್ ಕೊಡಿಸಲು ಬಡ ತಾಯಿಯೊಬ್ಬಳು ತನ್ನ ಕಿವಿ ಓಲೆ ಮಾರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಶೆಡ್‌ವೊಂದರಲ್ಲಿ ವಾಸವಿರುವ ಸರೋಜಿನಿ ಬೇವಿನಕಟ್ಟಿ ಎಂಬ ದೇವದಾಸಿ ಮಹಿಳೆ ತನ್ನ ಮಗಳ ಆನ್‌ಲೈನ್ ಶಿಕ್ಷಣಕ್ಕಾಗಿ 10 ಸಾವಿರಕ್ಕೆ ತನ್ನ ಬಂಗಾರದ ಕಿವಿ ಓಲೆ ಮಾರಿದ್ದಾಳೆ. ನಿತ್ಯ ಜೀವನಕ್ಕಾಗಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ದೇವದಾಸಿ ಮಹಿಳೆ ಈಗ ದುಡಿಯಲು ಕೆಲಸವೂ ಇಲ್ಲದೆ ಪರದಾಡುತ್ತಿದ್ದಾಳೆ.
ಸಚಿವೆ ಶಶಿಕಲಾ ಜೊಲ್ಲೆ ತುರ್ತು ಗಮನಕ್ಕೆ
ಆದ್ರೆ ತನ್ನ ಮಗಳು ರೇಣುಕಾಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಆಕೆಯ ಆನ್‌ಲೈನ್ ಶಿಕ್ಷಣಕ್ಕಾಗಿ ತನ್ನ ಬಂಗಾರದ ಕಿವಿ ಓಲೆ ಮಾರಿದ್ದಾಳೆ. ಮೂಲತಃ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಸರೋಜಿನಿ ಬೆವಿನಕಟ್ಟಿ, ಹಲವು ವರ್ಷಗಳಿಂದ ಬೆಳಗಾವಿಯಲ್ಲಿ ವಾಸವಿದ್ದಾಳೆ.
ಇದ್ದ ಒಬ್ಬ ಮಗ ರೇಲ್ವೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದು ಕೆಲಸವಿಲ್ಲದೇ ಮನೆಯಲ್ಲಿಯೇ ಇರುತ್ತಾನೆ. ಇನ್ನು ಮಗಳು ರೇಣುಕಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕೊರೊನಾ ಭೀತಿ ಹಿನ್ನೆಲೆ ಮನೆಗೆಲಸಕ್ಕೂ ಕೂಡಾ ಈಗ ಯಾರೂ ಕರೆಯುತ್ತಿಲ್ಲ.
ಮನೆಮನೆಗೆ ಹೋಗಿ ಧವಸ ಧಾನ್ಯ ಬೇಡಿ ಜೀವನ ಸಾಗಿಸಲು ಅವಕಾಶ ಸಿಗುತ್ತಿಲ್ಲವೆಂದು ಕಣ್ಣೀರು ಹಾಕುತ್ತಿರುವ ಸರೋಜಿನಿ, ತನಗೆ ಸೂಕ್ತ ನೆರವು ನೀಡುವಂತೆ ಬೆಳಗಾವಿಯವರೇ ಆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ.
Published On - 4:31 pm, Wed, 5 August 20