4,6,6,4,6: ಸ್ನೇಹ್ ರಾಣಾ ಸಿಡಿಲಬ್ಬರ: ಒಂದೇ ಓವರ್ನಲ್ಲಿ 28 ರನ್ಗಳ ದಾಖಲೆ
Womens Premier League 2025: ವುಮೆನ್ಸ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 225 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಕೇವಲ 213 ರನ್ಗಳಿಸಿ 12 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರೋಚಿತವಾಗಿ ಸೋಲುಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 225 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡವು 18 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತ್ತು. ಈ ಹಂತದಲ್ಲಿ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ನೇಹ್ ರಾಣಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಆರ್ಸಿಬಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು.
ಯುಪಿ ವಾರಿಯರ್ಸ್ ತಂಡದ ನಾಯಕಿ ದೀಪ್ತಿ ಶರ್ಮಾ ಎಸೆದ 19ನೇ ಓವರ್ನಲ್ಲಿ 2 ಫೋರ್ ಹಾಗೂ 3 ಸಿಕ್ಸ್ಗಳನ್ನು ಚಚ್ಚುವ ಮೂಲಕ ಸ್ನೇಹ್ ರಾಣಾ ಅಬ್ಬರಿಸಿದರು. ಪರಿಣಾಮ ದೀಪ್ತಿ ಶರ್ಮಾ ಓವರ್ನಲ್ಲಿ ಬರೋಬ್ಬರಿ 28 ರನ್ಗಳು ಮೂಡಿಬಂದವು.
ಆದರೆ 19ನೇ ಓವರ್ನ ಕೊನೆಯ ಎಸೆತದಲ್ಲಿ ಸ್ನೇಹ್ ರಾಣಾ ಔಟಾದರು. ಪರಿಣಾಮ ಆರ್ಸಿಬಿ ತಂಡವು 19.3 ಓವರ್ಗಳಲ್ಲಿ 213 ರನ್ಗಳಿಸಿ 12 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಳ್ಳಬೇಕಾಯಿತು. ಈ ಸೋಲಿನೊಂದಿಗೆ ಆರ್ಸಿಬಿ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
WPL ದಾಖಲೆಗಳು:
ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಸ್ನೇಹ್ ರಾಣಾ ಪಾಲಾಗಿದೆ. ದೀಪ್ತಿ ಶರ್ಮಾ ಓವರ್ನಲ್ಲಿ ಒಟ್ಟು 26 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ ಆ್ಯಶ್ ಗಾರ್ಡ್ನರ್ ಓವರ್ನಲ್ಲಿ ಸೋಫಿ ಡಿವೈನ್ 24 ರನ್ ಬಾರಿಸಿದ್ದು ದಾಖಲೆಯಾಗಿತ್ತು.
ಈ ಪಂದ್ಯದ 19ನೇ ಓವರ್ನಲ್ಲಿ 28 ರನ್ ಬಿಟ್ಟು ಕೊಡುವ ಮೂಲಕ ದೀಫ್ತಿ ಶರ್ಮಾ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಓವರ್ವೊಂದರಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ 2023ರಲ್ಲಿ 25 ರನ್ ಬಿಟ್ಟು ಕೊಟ್ಟ ತನುಜಾ ಕನ್ವರ್ ಹೆಸರಿನಲ್ಲಿತ್ತು.
ಇನ್ನು ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಬಾರಿಸಿದ 225 ರನ್ಗಳು ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದ ಗರಿಷ್ಠ ಸ್ಕೋರ್. ಇದಕ್ಕೂ ಮುನ್ನ 2023 ಡೆಲ್ಲಿ ಕ್ಯಾಪಿಟಲ್ಸ್ ಬಾರಿಸಿದ 223 ರನ್ಗಳು ಅತ್ಯಧಿಕ ಮೊತ್ತವಾಗಿತ್ತು. ಇದೀಗ 225 ರನ್ ಸಿಡಿಸಿ ಯುಪಿ ವಾರಿಯರ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.