6 ಬೌಂಡರಿ, 3 ಸಿಕ್ಸರ್, 66 ರನ್..! ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್
Radha Yadav Maiden WPL fifty: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 183 ರನ್ ಗಳಿಸಿದೆ. ಆರಂಭಿಕ ಆಘಾತದ ನಂತರ, ರಾಧಾ ಯಾದವ್ ಅವರ ಚೊಚ್ಚಲ WPL ಅರ್ಧಶತಕ (66 ರನ್) ಮತ್ತು ರಿಚಾ ಘೋಷ್ (44 ರನ್) ಅವರ ಜೊತೆಯಾಟವು ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ಯಿತು. ಈ ಪ್ರಮುಖ ಜೊತೆಯಾಟವು RCB ಯ ಗೆಲುವಿಗೆ ಭದ್ರ ಬುನಾದಿ ಹಾಕಿತು.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ 9ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 183 ರನ್ ಕಲೆಹಾಕಿದೆ. ತಂಡ ಈ ಬೃಹತ್ ಮೊತ್ತ ಕಲೆಹಾಕುವಲ್ಲಿ ಆಲ್‌ರೌಂಡರ್ ರಾಧಾ ಯಾದವ್ ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ಆರ್ಸಿಬಿ ಕೇವಲ 43 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಬ್ಯಾಟಿಂಗ್ಗೆ ಬಂದ ರಾಧಾ, ರಿಚಾ ಜೊತೆ ಉತ್ತಮ ಜೊತೆಯಾಟ ಕಟ್ಟಿದರು.
ಈ ಜೋಡಿ ಐದನೇ ವಿಕೆಟ್ಗೆ 66 ಎಸೆತಗಳಲ್ಲಿ 105 ರನ್ಗಳ ಜೊತೆಯಾಟವನ್ನಾಡಿ ತಂಡವನ್ನು 148 ರನ್ಗಳಿಗೆ ಕೊಂಡೊಯ್ಯಿತು. ಈ ಹಂತದಲ್ಲಿ ರಿಚಾ ಘೋಷ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 44 ರನ್ ಗಳಿಸಿದರೆ, ರಾಧಾ ಯಾದವ್ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರು. ಇದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಧಾ ಯಾದವ್ ಅವರ ಚೊಚ್ಚಲ ಅರ್ಧಶತಕವಾಗಿದೆ. ಈ ಇಬ್ಬರನ್ನು ಹೊರತುಪಡಿಸಿ ನಾಡಿನ್ ಡಿ ಕ್ಲರ್ಕ್ 12 ಎಸೆತಗಳಲ್ಲಿ 26 ರನ್ ಗಳಿಸಿದರು.