WPL 2026: ಡಬ್ಲ್ಯುಪಿಎಲ್​ನಲ್ಲಿ ಮೊಟ್ಟ ಮೊದಲ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್

Updated on: Jan 26, 2026 | 9:39 PM

WPL First Century: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೊನೆಗೂ ಮೊದಲ ಶತಕ ದಾಖಲಾಗಿದೆ! ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸಿವರ್-ಬ್ರಂಟ್, ಆರ್‌ಸಿಬಿ ವಿರುದ್ಧ ಕೇವಲ 57 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದರು. 1059 ದಿನಗಳು ಮತ್ತು 82 ಪಂದ್ಯಗಳ ಕಾಯುವಿಕೆಯ ನಂತರ WPL ನ ಮೊದಲ ಸೆಂಚುರಿ ಮೂಡಿಬಂದಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಕೊನೆಗೂ ಮೊದಲ ಶತಕ ದಾಖಲಾಗಿದೆ. ಈ ಲೀಗ್​ನ ನಾಲ್ಕನೇ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಲೆಜೆಂಡರಿ ಆಲ್​ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ನಿರ್ಣಾಯಕ ಪಂದ್ಯದಲ್ಲಿ, ನ್ಯಾಟ್ ಸಿವರ್-ಬ್ರಂಟ್ ಕೇವಲ 57 ಎಸೆತಗಳಲ್ಲಿ ಶತಕ ಗಳಿಸಿ, ಡಬ್ಲ್ಯುಪಿಎಲ್​ನಲ್ಲಿ ತನ್ನ ಹೆಸರನ್ನು ಶಾಶ್ವತಗೊಳಿಸಿದರು. ಸತತ ನಾಲ್ಕು ಆವೃತ್ತಿಗಳಲ್ಲಿ ಅನೇಕ ಆಟಗಾರ್ತಿಯರು ಶತಕದಂಚಿಗೆ ಬಂದು ಎಡವುತ್ತಿದ್ದರು. ಇದರಿಂದಾಗಿ ಮೊದಲ ಶತಕಕ್ಕಾಗಿ ಇಷ್ಟು ವರ್ಷ ಕಾಯಬೇಕಾಯಿತು. ಅಂದರೆ 1059 ದಿನಗಳು ಮತ್ತು 82 ಪಂದ್ಯಗಳ ನಂತರ, ಡಬ್ಲ್ಯುಪಿಎಲ್​ನಲ್ಲಿ ಅಂತಿಮವಾಗಿ ಮೊದಲ ಶತಕ ದಾಖಲಾಗಿದೆ.

ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರ್ತಿ ಸಜೀವನ ಸಜ್ನಾ ಅವರನ್ನು ಮೂರನೇ ಓವರ್‌ನಲ್ಲಿ ಕಳೆದುಕೊಂಡು ಕಳಪೆ ಆರಂಭ ಕಂಡಿತು. ಆದಾಗ್ಯೂ, ನ್ಯಾಟ್ ಸಿವರ್, ಸಹ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಅವರೊಂದಿಗೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಗೆಯೇ ಇವರಿಬ್ಬರ ನಡುವೆ 131 ರನ್‌ಗಳ ಜೊತೆಯಾಟವೂ ಮೂಡಿಬಂತು.

ಅರ್ಧಶತಕ ಬಾರಿಸಿದ ನಂತರ ಮ್ಯಾಥ್ಯೂಸ್ ಔಟಾದರೂ ನ್ಯಾಟ್ ಸಿವರ್ ತಮ್ಮ ಅಬ್ಬರ ಮುಂದುವರೆಸಿದರು. ಆರ್‌ಸಿಬಿ ಬೌಲರ್‌ಗಳ ಮೇಲೆ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದ ಬ್ರಂಟ್ ಅಂತಿಮವಾಗಿ 20 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಂಗಲ್ ಮೂಲಕ ಶತಕ ಪೂರೈಸಿದರು. 57 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಬ್ರಂಟ್ ಅವರ ಈ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ, ಮುಂಬೈ 20 ಓವರ್‌ಗಳಲ್ಲಿ 200 ರನ್‌ಗಳ ಕಠಿಣ ಗುರಿ ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 26, 2026 09:38 PM