Vaibhav Suryavanshi: ಬರೋಬ್ಬರಿ 41 ಸಿಕ್ಸರ್..! ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ
Vaibhav Suryavanshi: 14 ವರ್ಷದ ವೈಭವ್ ಸೂರ್ಯವಂಶಿ ಅವರು ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧದ ಯುವ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 6 ಸಿಕ್ಸರ್‌ಗಳ ಸಹಾಯದಿಂದ 70 ರನ್ ಗಳಿಸಿದ ಅವರು ಯುವ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (41) ಬಾರಿಸಿದ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದು ಉನ್ಮುಕ್ತ್ ಚಂದ್ ಅವರ ಹಿಂದಿನ ದಾಖಲೆಯನ್ನು ಮುರಿದಿದೆ. ಕೇವಲ 10 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವೈಭವ್, ತಮ್ಮ ಭರವಸೆಯ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
14 ವರ್ಷದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಆಸ್ಟ್ರೇಲಿಯಾದ ಅಂಡರ್ -19 ತಂಡದ ವಿರುದ್ಧದ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ಆರು ಸಿಕ್ಸರ್‌ಗಳ ಸಹಾಯದಿಂದ 70 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವೈಭವ್ ಸೂರ್ಯವಂಶಿ ಈಗ ಯೂತ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. 38 ಸಿಕ್ಸರ್ ಬಾರಿಸಿದ್ದ ಅಂಡರ್ -19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಂದ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಇದೀಗ ವೈಭವ್ 41 ಸಿಕ್ಸರ್ ಬಾರಿಸುವ ಮೂಲಕ ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.
ಉನ್ಮುಕ್ತ್ ಚಂದ್ 21 ಪಂದ್ಯಗಳಲ್ಲಿ 38 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ವೈಭವ್ ಕೇವಲ 10 ಪಂದ್ಯಗಳಲ್ಲಿ 41 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸೂರ್ಯವಂಶಿ ಇದುವರೆಗೆ ಯೂತ್ ಏಕದಿನ ಪಂದ್ಯಗಳಲ್ಲಿ 540 ರನ್‌ಗಳನ್ನು ಬಾರಿಸಿದ್ದಾರೆ.
ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಅವಕಾಶ ಕಳೆದುಕೊಂಡಿದ್ದ ವೈಭವ್ ಸೂರ್ಯವಂಶಿ ಎರಡನೇ ಪಂದ್ಯದಲ್ಲಿ ಶತಕ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಸೂರ್ಯವಂಶಿ 68 ಎಸೆತಗಳಲ್ಲಿ 70 ರನ್ ಗಳಿಸಿದರು. ಒಂದು ಹಂತದಲ್ಲಿ, ಅವರು ಸುಲಭವಾಗಿ ಶತಕ ತಲುಪುತ್ತಾರೆ ಎಂದು ತೋರುತ್ತಿತ್ತು, ಆದರೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಆರ್ಯನ್ ಶರ್ಮಾ ಅದ್ಭುತ ಕ್ಯಾಚ್ ಹಿಡಿದು ವೈಭವ್ ಆಟಕ್ಕೆ ಅಂತ್ಯಹಾಡಿದರು.