ಫ್ಲೋರಿಡಾದ ಹಾಲಿವುಡ್ ನಲ್ಲಿರುವ ರೆಡ್ ಲಾಬಸ್ಟರ್ ರೆಸ್ಟುರಾಂಟ್ (Red Lobster Restaurant) ಸಿಬ್ಬಂದಿ ಎಂದಿನಂತೆ ಹೋಟೆಲ್ ಗೆ ಡೆಲಿವರಿಯಾದ ಕಡಲೇಡಿಗಳ ಬಾಕ್ಸ್ ಅನ್ನು ಬಿಚ್ಚಿ ಸುಮ್ಮನೆ ಒಮ್ಮೆ ಕಣ್ಣು ಹಾಯಿಸಿದಾಗ ಅದರಲ್ಲಿದ್ದ ಏಡಿಗಳ (lobster) ಪೈಕಿ ಒಂದು ಮಾತ್ರ ಬೇರೆಯವುಗಳಿಗಿಂತ ಭಿನ್ನವಾಗಿ ಕಂಡಿದೆ. ಸಾಮಾನ್ಯವಾಗಿ ಎಲ್ಲ ಏಡಿಗಳ ಮೈಕವಚ (shell) ಕಂದು ಮಿಶ್ರಿತ ಹಸಿರು ಬಣ್ಣದ್ದಾಗಿದ್ದರೆ ಈ ಏಡಿಯ ಶೆಲ್ ಹೊಳೆಯುವ ಕಿತ್ತಳೆ ಬಣ್ಣದ್ದಾಗಿತ್ತು ಅಂತ ನ್ಯೂಸ್ವೀಕ್ ಪತ್ರಿಕೆ ವರದಿ ಮಾಡಿದೆ.
ಈ ರೆಸ್ಟುರಾಂಟ್ ಏಡಿಯ ಖಾದ್ಯಗಳಿಗೆ ಫೇಮಸ್ಸು ಮಾರಾಯ್ರೇ. ಆದರೆ ಅಲ್ಲಿನ ಸಿಬ್ಬಂದಿ ಭಿನ್ನ ಬಣ್ಣದ ಏಡಿಯನ್ನು ಅಡುಗೆಗೆ ಉಪಯೋಗಿಸದೆ ಸಂರಕ್ಷಿಸುವ ನಿರ್ಧಾರ ಮಾಡಿ ಅದಕ್ಕೆ ಚೆದ್ದರ್ ಅಂತ ಹೆಸರಿಟ್ಟಿದ್ದಾರೆ. ಸದರಿ ರೆಸ್ಟುರಾಂಟ್ ಚೆದ್ದರ್ ಹೆಸರಿನ ಬಿಸ್ಕತ್ತುಗಳಿಗೂ ಬಹಳ ಹೆಸರುವಾಸಿಯಾಗಿದೆ.
ಚೆದ್ದರನ್ನು ಈ ವಾರ ಸೌತ್ ಕೆರೊಲಿನಾದ ಮಿರ್ಟಲ್ ಬೀಚ್ನಲ್ಲಿರುವ ರಿಪ್ಲೀಸ್ ಅಕ್ವೇರಿಯಂಗೆ ರವಾನಿಸಲಾಗಿದೆ. ಪ್ರತಿಕೆಯ ವರದಿ ಪ್ರಕಾರ ಚೆದ್ದರ್ ತನ್ನ ಮಿಕ್ಕಿದ ಬದುಕನ್ನು ಆ ಮತ್ಸ್ಯಗಾರದಲ್ಲಿ ಕಳೆಯಲಿದೆ.
ರೆಸ್ಟುರಾಂಟ್ ನವರು ಹೇಳುವಂತೆ ಮೂರು ಕೋಟಿ ಏಡಿಗಳಲ್ಲಿ ಒಂದು ಚೆದ್ದರ್ ನಂಥ ಏಡಿ ಸಿಗುತ್ತದೆ. ಮಿಂಚುವ ಕಿತ್ತಳೆ ಬಣ್ಣದ ಏಡಿಗಳು ಬಹಳ ಅಪರೂಪ ಎಂದು ಹೇಳಲಾಗುತ್ತದೆ. ಅವುಗಳ ಬಣ್ಣ ಕೂಡ ಅಸ್ವಾಭಾವಿಕವಾಗಿದ್ದು ವನ್ಯಪ್ರದೇಶಗಳಲ್ಲಿ ಬೇಟೆಗಾರ ಪ್ರಾಣಿಗಳಿಗೆ ಅದು ಸುಲಭವಾಗಿ ಕಂಡುಬಿಡುತ್ತದೆ.
ಚೆದ್ದರ್ ನ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ ರೆಡ್ ಲಾಬ್ಸ್ಟರ್ ರೆಸ್ಟುರಾಂಟ್ ಮ್ಯಾನೇಜರ್ ಮಾರಿಯೋ ರೋಕ್ ಆ ಏಡಿಯನ್ನು ಒಂದು ‘ಸಾಮಾನ್ಯ ಪವಾಡ’ ಎಂದು ವರ್ಣಿಸಿರುವರೆಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
‘ಚೆದ್ದರನ್ನು ರಕ್ಷಿಸುವುದು ಜನರ ಗುಂಪೊಂದರ ನೆರವಿನಿಂದ ನಮಗೆ ಸಾಧ್ಯವಾಯಿತು,’ ಎಂದು ರೋಕ್ ಹೇಳಿದ್ದಾರೆ.
‘ಚೆದ್ದರ್ ಒಂದು ಹೆಣ್ಣು ಏಡಿಯಾಗಿದೆ. ಅದನ್ನು ಸಂರಕ್ಷಿಸಿದ್ದು ನಮ್ಮಲ್ಲಿ ಅತೀವ ಹೆಮ್ಮೆ ಮೂಡಿಸಿದೆ. ಅವಳಿಗೆ ಒಂದು ಸುರಕ್ಷಿತ ತಾಣ ಸಿಕ್ಕಿದ್ದು ನಮ್ಮೆಲ್ಲರಿಗೆ ಬಹಳ ಸಂತೋಷ ತಂದಿದೆ,’ ಎಂದು ರೋಕ್ ಹೇಳಿದ್ದಾರೆ.
‘ಏಡಿಯನ್ನು ಸ್ವತಃ ಪರೀಕ್ಷಿಸದೆಯೇ ಅದರ ಬಣ್ಣ ಮತ್ತು ಇತರ ಗುಣಗಳ ಬಗ್ಗೆ ನಿರ್ಧರಿಸುವುದು ಕಷ್ಟ,’ ಎಂದು ಯುರೋಪಿಯನ್ ಮರಿಟೈಮ್ ಮತ್ತು ಫಿಶರೀಸ್ ಫಂಡ್‌ನ ಮೀನುಗಾರಿಕೆ ಸಂಶೋಧನಾ ಅಧಿಕಾರಿ ಮತ್ತು ಸಮುದ್ರ ಪರಿಸರ ವ್ಯವಸ್ಥೆ ತಜ್ಞರಾದ ಡಾ ಚಾರ್ಲೊಟ್ ಈ ಡೇವಿಸ್ ನ್ಯೂಸ್‌ವೀಕ್‌ಗೆ ತಿಳಿಸಿದ್ದಾರೆ. ಕೆಲವು ಏಡಿ ವಿವಿಧ ಬಣ್ಣಗಳ ರೂಪಾಂತರಗಳೊಂದಿಗೆ ಯಾಕೆ ಅಭಿವೃದ್ಧಿ ಹೊಂದುತ್ತವೆ ಎನ್ನುವ ಬಗ್ಗೆ ಸಿದ್ಧಾಂತಗಳಿವೆ,’ ಎಂದು ಅವರು ಹೇಳಿದ್ದಾರೆ.
‘ಈ ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು ಆನುವಂಶಿಕ ರೂಪಾಂತಕ್ಕೆ ಸಂಬಂಧಿಸಿದ್ದು, ಇದು ಶೆಲ್‌ನಲ್ಲಿ ಪ್ರೊಟೀನ್ ಕಾಣೆಯಾಗುವುದಕ್ಕೆ ಅಥವಾ ಅಲ್ಲಿ ಗೋಚರಿಸುವುದಕ್ಕೆ ಕಾರಣವಾಗುತ್ತದೆ. ಏಡಿಯ ಬಣ್ಣವನ್ನು ಏಡಿ ಕ್ಯಾರಪೇಸ್ ಅಥವಾ ಶೆಲ್‌ನಲ್ಲಿರುವ ಪ್ರೋಟೀನ್‌ಗಳಿಂದ ನಿರ್ಧರಿಸಲಾಗುತ್ತದೆ. ಈ ಎರಡು ಪ್ರೋಟೀನ್‌ಗಳು ಅಸ್ಟಾಕ್ಸಾಂಥಿನ್ ಆಗಿದ್ದು, ಇದನ್ನು ಪ್ರತ್ಯೇಕಿಸಿದಾಗ, ಕಿತ್ತಳೆ, ಕೆಂಪು, ಮತ್ತು ಕ್ರಸ್ಟಾಸಯಾನಿನ್, ನೀಲಿ ಬಣ್ಣದ ಸಂಕೀರ್ಣ ಕಾಣಿಸುತ್ತದೆ,’ ಎಂದು ಡೇವಿಸ್ ಹೇಳಿದ್ದಾರೆ.