ಚೀನಾ (china) ಭಾರತದ (India) ವಿಚಾರದಲ್ಲಿ ಒಂದಲ್ಲ ಒಂದು ವಿವಾದಗಳನ್ನು ಹುಟ್ಟು ಹಾಕುತ್ತಿದೆ. ಭಾರತ ಮತ್ತು ಚೀನಾ ಗಡಿ ವಿಚಾರದಲ್ಲಿ ಇಲ್ಲಸಲ್ಲದ ಗೊಂದಲವನ್ನು ಸೃಷ್ಟಿ ಮಾಡಲು ಪ್ರತಿಹಂತದಲ್ಲೂ ಡ್ರ್ಯಾಗನ್ ದೇಶ ಪ್ರಯತ್ನ ಮಾಡುತ್ತಿದೆ. ಇದೀಗ ಇಂತಹದೇ ಮತ್ತೊಂದು ವಿವಾದಕ್ಕೆ ಚೀನಾ ಕಾರಣವಾಗಿದೆ. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ಒಳಗೊಂಡಂತೆ ವಿವಾದತ್ಮಕ ಪ್ರದೇಶಗಳನ್ನು ಚೀನಾ ತನ್ನ ನವೀಕರಿಸಿದ ಹೊಸ ಸ್ಟ್ಯಾಂಡರ್ಡ್ ಮ್ಯಾಪ್ನಲ್ಲಿ ಉಲ್ಲೇಖಿಸಿದೆ. ಈ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ಮೊಂಡುತನವನ್ನು ಮುಂದುವರಿಸಿದೆ. ಆಗಸ್ಟ್ 28ರಂದು ಈ ಮ್ಯಾಪ್ನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಚೀನಾ 2023ರಲ್ಲಿ ಅಧಿಕೃತವಾಗಿ ನವೀಕರಿಸಿದ ನಕ್ಷೆಯನ್ನು, ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ಪ್ರಮಾಣಿತ ನಕ್ಷೆ ಸೇವಾ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಜಾಗತಿಕ ಭೌಗೋಳಿಕತೆಯ ಮೇಲೆ ಚೀನಾದ ದೃಷ್ಟಿಕೋನವನ್ನು ಈ ನಕ್ಷೆಯಲ್ಲಿ ತಿಳಿಸಲಾಗಿದೆ. ಆದರೆ ಈಗಾಗಲೇ ನೆರೆಯ ರಾಷ್ಟ್ರಗಳೊಂದಿಗೆ (ಭಾರತ) ಗಡಿ ವಿವಾದ ಇದ್ದರು ಈ ನಕ್ಷೆಯನ್ನು ಬಿಡುಗಡೆ ಮಾಡಿದೆ.
ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ರಾಷ್ಟ್ರೀಯ ಗಡಿಗಳ ರೇಖಾಚಿತ್ರ ವಿಧಾನವನ್ನು ಆಧರಿಸಿ ಈ ನಕ್ಷೆಯನ್ನು ರಚಿಸಲಾಗಿದೆ ಎಂದು ಚೀನಾ ಸರ್ಕಾರಿ ಟ್ವಿಟರ್ನಲ್ಲಿ ತಿಳಿಸಲಾಗಿದೆ. ಇನ್ನು ಚೀನಾ ಮತ್ತು ಭಾರತದ ನಡುವೆ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ವಿಚಾರವಾಗಿ ಹಲವು ವರ್ಷಗಳಿಂದ ದೊಡ್ಡ ವಿವಾದವೇ ಇದೆ. ಅರುಣಾಚಲ ಪ್ರದೇಶ, ದಕ್ಷಿಣ ಟಿಬೆಟ್ ನಮ್ಮ ಪ್ರದೇಶ ಎಂದು ಚೀನಾ ಹೇಳಿಕೊಂಡರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿ ಇಂದಿಗೂ ಉಳಿದುಕೊಂಡಿದೆ.
ಇದನ್ನೂ ಓದಿ: ಚೀನಾದಲ್ಲಿ ಜನಸಂಖ್ಯೆ ಕುಸಿತ: ಮದುವೆಯಾಗಲಿರುವ ವಧು 25 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ದಂಪತಿಗೆ ನಗದು ಬಹುಮಾನ
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ತನ್ನ ನಿಲ್ಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಚೀನಾ ಈಗಾಗಲೇ ಅಧಿಕೃತವಾಗಿ ನವೀಕರಿಸಿರುವ ಭೂಪಟದಲ್ಲಿ ಭಾರತದ ಗಡಿಯನ್ನು ದಾಟಿದೆ. ಇನ್ನು ತೈವಾನ್ನ್ನು ತನ್ನ ಭೂಪ್ರದೇಶದಿಂದ ಬೇರ್ಪಡಿಸಲಾಗದ ಭಾಗವೆಂದು ಚೀನಾ ಹೇಳಿಕೊಂಡಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನೇತೃತ್ವದಲ್ಲಿ ಇದಕ್ಕೆ ಕಾರ್ಯತಂತ್ರವನ್ನು ಕೂಡ ರಚನೆ ಮಾಡಲಾಗಿದೆ. ಈ ವಿಚಾರ ತೈವಾನ್ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಚೀನಾ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹಾಗಾಗಿ ಚೀನಾವು ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಬ್ರೂನಿ ಮತ್ತು ತೈವಾನ್‌ನಂತಹ ದೇಶಗಳ ವಿರೋಧವನ್ನು ಎದುರಿಸುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Tue, 29 August 23