ಹೆಣ್ಣುಮಕ್ಕಳ ಶಿಕ್ಷಣವನ್ನು ಸದಾ ವಿರೋಧಿಸುತ್ತಲೇ ಬಂದಿರುವ ತಾಲಿಬಾನಿ(Taliban)ಗಳು ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದ ಬಳಿಕ ಅಲ್ಲಿನ ಬಾಲಕಿಯರು, ಕಾಲೇಜು ಯುವತಿಯರ ಶಿಕ್ಷಣದ ಬಗ್ಗೆ ಬಹುದೊಡ್ಡ ಪ್ರಶ್ನೆ ಎದ್ದಿತ್ತು. ಆ ಪ್ರಶ್ನೆಗೀಗ ತಾಲಿಬಾನ್ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಉತ್ತರಿಸಿದ್ದಾರೆ. ಅಫ್ಘಾನಿಸ್ತಾನ ದೇಶಾದ್ಯಂತ ಶೇ.75ರಷ್ಟು ಹುಡುಗಿಯರು ತಮ್ಮ ಶಿಕ್ಷಣವನ್ನು ಇದೀಗ ಮುಂದುವರಿಸಿದ್ದಾರೆ. ಶಾಲೆಗಳಿಗೆ ತೆರಳಿ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿರುವ ಅಫ್ಘಾನಿಸ್ತಾನ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಕೇಂದ್ರದಲ್ಲಿ, ಅಫ್ಘಾನಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಎತ್ತಲಾದ ಪ್ರಶ್ನೆಗೆ ಉತ್ತರಿಸುತ್ತ ಈ ಅಂಕಿ-ಸಂಖ್ಯೆಯನ್ನು ಮುಂದಿಟ್ಟಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಆಗಸ್ಟ್ನಿಂದ ತಾಲಿಬಾನ್ ಆಡಳಿತ ಬಂದಿದೆ. ತಾಲಿಬಾನ್ ಅಫ್ಘಾನ್ನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಲ್ಲಿ ಅಕ್ಷರಶಃ ಯುದ್ಧಸನ್ನಿವೇಶ ಉಂಟಾಗಿತ್ತು. ಈ ವೇಳೆ ತಾಲಿಬಾನಿಗಳು ದೇಶಾದ್ಯಂತ ಬಾಲಕರು ಮತ್ತು ಬಾಲಕಿಯರ ಶಾಲೆ, ಕಾಲೇಜುಗಳನ್ನು ಮುಚ್ಚಿಸಿದ್ದರು. ಅದಾದ ಬಳಿಕ ಸೆಪ್ಟೆಂಬರ್ 18ರಿಂದ 6-12ನೇ ತರಗತಿಯವರೆಗಿನ ಬಾಲಕರ ಶಾಲೆ, ಕಾಲೇಜುಗಳನ್ನು ತೆರೆದು, ಅವರ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಕೇವಲ ಪುರುಷ ಶಿಕ್ಷಕರಷ್ಟೇ ಶಾಲೆಗೆ ಕಲಿಸಲು ಹೋಗಬೇಕು ಎಂಬ ಷರತ್ತನ್ನೂ ಹಾಕಿತ್ತು. ಇನ್ನು ಹುಡುಗಿಯರ ವಿಚಾರಕ್ಕೆ ಬಂದರೆ ಆರನೇ ತರಗತಿಯವರೆಗಿನ ಬಾಲಕಿಯರ ಶಾಲೆಗಳು ತೆರೆಯಲ್ಪಟ್ಟಿದ್ದರೂ, ಅದಕ್ಕಿಂತ ಮೇಲ್ಪಟ್ಟ ಹುಡುಗಿಯರಿಗೆ ಶಾಲೆ-ಕಾಲೇಜಿಗೆ ಹೋಗಲು ಅವಕಾಶ ಇರಲಿಲ್ಲ. ಆದರೆ ಅವರ ಈ ಕ್ರಮಕ್ಕೆ ಜಾಗತಿಕ ಸಮುದಾಯದಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ಶುಕ್ರವಾರ ತಾಲಿಬಾನಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೀಗೊಂದು ಹೇಳಿಕೆ ನೀಡಿದ್ದಾರೆ. ಜಾಗತಿಕ ಸಮುದಾಯ ಇಬ್ಬಗೆತನ ತೋರುತ್ತಿದೆ. ಆ ಕಡೆ ಯುಎಸ್ ಅಫ್ಘಾನ್ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ಇದರಿಂದಾಗಿ ಶಿಕ್ಷಕರಿಗೆ ಸಂಬಳಕೊಡುವುದೂ ಕಷ್ಟವಾಗಿದೆ. ಜಾಗತಿಕ ಸಮುದಾಯ ಶಿಕ್ಷಕರಿಗೆ ವೇತನ ಕೊಡದೆ ಇದ್ದರೂ ಟೀಕಿಸುತ್ತದೆ, ಮಕ್ಕಳಿಗೆ ಶಿಕ್ಷಣ ಕೊಡದೆ ಇದ್ದರೂ ವ್ಯಂಗ್ಯವಾಡುತ್ತದೆ ಎಂದು ಹೇಳಿದ್ದಾರೆ ಎಂದು ಡಾನ್ ಮಾಧ್ಯಮ ವರದಿ ಮಾಡಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಾದ್ಯಂತ 5,00,000 ಪೌರ ಕಾರ್ಮಿಕರು ದುಡಿಯುತ್ತಿದ್ದು, ಅವರಿಗೆಲ್ಲ ಸಂಬಳ ನೀಡಲಾಗುತ್ತಿದೆ. ಯಾರನ್ನೂ ಕೆಲಸದಿಂದ ತೆಗೆದುಹಾಕಿಲ್ಲ. ಮಹಿಳಾ ಉದ್ಯೋಗಿಗಳನ್ನೂ ವಜಾ ಮಾಡಿಲ್ಲ ಎಂದು ತಾಲಿಬಾನ್ ಸಚಿವ ಹೇಳಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ನನ್ನ ಮಗನನ್ನು ತಮ್ಮ ಪ್ರೊಡಕ್ಷನ್ ಹೌಸ್ ಮೂಲಕವೇ ಲಾಂಚ್ ಮಾಡುವುದಾಗಿ ಅಪ್ಪು ಹೇಳಿದ್ದರು: ಸಾಯಿಕುಮಾರ್