ನನ್ನ ಮಗನನ್ನು ತಮ್ಮ ಪ್ರೊಡಕ್ಷನ್ ಹೌಸ್ ಮೂಲಕವೇ ಲಾಂಚ್ ಮಾಡುವುದಾಗಿ ಅಪ್ಪು ಹೇಳಿದ್ದರು: ಸಾಯಿಕುಮಾರ್

ಪುನೀತ್ ಬಗ್ಗೆ ಸಾಯಿಕುಮಾರ್ ಬಹಳ ಭಾವುಕರಾಗಿ ಮಾತಾಡಿದರು. ಅವರ ನಟನೆ ಮತ್ತು ವ್ಯಕ್ತಿತ್ವವನ್ನು ಸಾಯಿ ಕೊಂಡಾಡಿದರು. ‘ರಂಗಿತರಂಗ’ ಚಿತ್ರದಲ್ಲಿನ ನಟನೆಗೆ ದೊರೆತ ಎಸ್ಐಐಎಮ್ಎ ಪ್ರಶಸ್ತಿಯನ್ನು ಅವರಿಂದಲೇ ಸ್ವೀಕರಿಸಿದ್ದನ್ನು ಮೆಲಕು ಹಾಕಿದರು.

ಬಹುಭಾಷಾ ನಟ ಸಾಯಿಕುಮಾರ್ ಅವರನ್ನು ಕನ್ನಡ ನಾಡಲ್ಲಿ ಡೈಲಾಗ್ ಕಿಂಗ್ ಅಂತ ಕರೆಯುತ್ತಾರೆ. ತೆಲುಗಿನಲ್ಲಿ ಅತ್ಯಂತ ಬ್ಯುಸಿ ನಟರಾಗಿರುವ ಸಾಯಿ ಶನಿವಾರ ಪುನೀತ್ ರಾಜುಕುಮಾರ ಅವರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರನ್ನು ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಮಾತಾಡಿಸಿದರು. ಡಾ ರಾಜ್ ಕುಟುಂಬದ ಜೊತೆ ತಮಗೆ ಬಹಳ ವರ್ಷಗಳಿಂದ ನಂಟಿದೆ ಎಂದು ಮಾತಿಗಾರಂಭಿಸಿದ ಸಾಯಿಕುಮಾರ್ ಅವರು ಡಾ ರಾಜ್ ಅವರನ್ನು ಅಪ್ಪಾಜಿ, ಮತ್ತು ಪಾರ್ವತಮ್ಮ ಅವರನ್ನು ಅಮ್ಮ ಎಂದು ಸಂಬೋಧಿಸುತ್ತಿದ್ದರಂತೆ. ಶಿವಣ್ಣ ಮತ್ತು ರಾಘಣ್ಣ ಆವರೊಂದಿಗೂ ಆತ್ಮೀಯ ಒಡನಾಟವಿದೆ, ರಾಘಣ್ಣ ಅವರ ಮಗನೊಂದಿಗೆ ಸಿನಿಮಾನಲ್ಲಿ ನಟಿಸಿರುವ ಸಂಗತಿಯನ್ನು ಅವರು ಹೇಳಿದರು.

ಪುನೀತ್ ಬಗ್ಗೆ ಸಾಯಿಕುಮಾರ್ ಬಹಳ ಭಾವುಕರಾಗಿ ಮಾತಾಡಿದರು. ಅವರ ನಟನೆ ಮತ್ತು ವ್ಯಕ್ತಿತ್ವವನ್ನು ಸಾಯಿ ಕೊಂಡಾಡಿದರು. ‘ರಂಗಿತರಂಗ’ ಚಿತ್ರದಲ್ಲಿನ ನಟನೆಗೆ ದೊರೆತ ಎಸ್ಐಐಎಮ್ಎ ಪ್ರಶಸ್ತಿಯನ್ನು ಅವರಿಂದಲೇ ಸ್ವೀಕರಿಸಿದ್ದನ್ನು ಮೆಲಕು ಹಾಕಿದ ಆವರು, ಪ್ರಶಸ್ತಿ ಸ್ವೀಕರಿಸಿದ ನಂತರ ‘ಬಬ್ರುವಾಹನ’ ಚಿತ್ರದ ಡೈಲಾಗನ್ನು ತೆಲುಗಿನಲ್ಲಿ ಹೇಳಿದಾಗ ಅಪ್ಪು ಅದನ್ನು ಬಹಳ ಇಷ್ಟಪಟ್ಟರಂತೆ.

ಅಪ್ಪು ಅವರೊಂದಿಗೆ ‘ಯುವರತ್ನ’ ಚಿತ್ರದಲ್ಲಿ ನಟಿಸಿದನ್ನು ಹೇಳುವಾಗ ಸಾಯಿ ಅವರು ಪುನೀತ್ ಅಷ್ಟು ದೊಡ್ಡ ಸ್ಟಾರ್, ಪವರ್ ಸ್ಟಾರ್ ಅನಿಸಿಕೊಂಡಿದ್ದರೂ ಅವರಲ್ಲಿ ಹಮ್ಮು-ಬಿಮ್ಮಿನ ಲವಲೇಶವೂ ಇರಲಿಲ್ಲ, ಅಂಥ ಸರಳ ಮತ್ತು ಡೌನ್ ಟು ಆರ್ತ್ ವ್ಯಕ್ತಿ ನಮ್ಮ ಮಧ್ಯೆ ಈಗ ಇಲ್ಲ ಅನ್ನೋದನ್ನ ನಂಬಕ್ಕೆ ಆಗಲ್ಲ, ತಾನೀಗ ಅವರ ಸಮಾಧಿಗೆ ಬಂದಿದ್ದರೂ ಅವರ ಜೊತೆ ಸಿನಿಮಾವೊಂದರ ಶೂಟಿಂಗ್ಗೆ ಬಂದಂತಿದೆ ಎಂದು ಸಾಯಿಕುಮಾರ ಹೇಳಿದರು.

ತಮ್ಮ ಮಗಳ ಪ್ರಾಡಕ್ಟ್ ಒಂದನ್ನು ಅಪ್ಪು ಅವರಿಂದ ಲಾಂಚ್ ಮಾಡಿಸಿದ್ದನ್ನು ಸಹ ಸಾಯಿಕುಮಾರ ಜ್ಞಾಪಿಸಿಕೊಂಡರು. ಖುದ್ದು ಪುನೀತ್ ಅವರೇ ತಮ್ಮ ಶೂಟಿಂಗ್ ದಿನಾಂಕಗಳನ್ನು ಪರಿಶೀಲಿಸಿ ಬಿಡುವು ಮಾಡಿಕೊಂಡು ಪ್ರಾಡಕ್ಟ್ ಲಾಂಚ್ ಮಾಡಿದರಂತೆ. ಅದು ಮಕ್ಕಳ ಪ್ರಾಡಕ್ಟ್ ಆಗಿದ್ದರಿಂದ ಅಪ್ಪು ಅವರಿಂದಲೇ ಮಾಡಿಸಬೇಕೆಂಬ ಮಹದಾಸೆ ಸಾಯಿ ಅವರ ಮಗಳಿಗೆ ಇತ್ತಂತೆ.

ಅದೇ ಸಮಯದಲ್ಲಿ ಸಾಯಿ ಅವರು ತಮ್ಮ ಮಗನನ್ನು ಕನ್ನಡ ಚಿತ್ರರಂಗದಲ್ಲಿ ಲಾಂಚ್ ಮಾಡಬೇಕೆನ್ನುವ ಇಚ್ಛೆ ಪ್ರಕಟಿಸಿದಾಗ ಅಪ್ಪು ಅವರು ಕೂಡಲೇ ತಮ್ಮ ಪ್ರೊಡಕ್ಷನ್ ಹೌಸ್ನಿಂದಲೇ ಅವರನ್ನು ಲಾಂಚ್ ಮಾಡುವುದಾಗಿ ಹೇಳಿದರಂತೆ. ಆಗ ಅವರೊಂದಿಗೆ ಅಶ್ವಿನಿಯೂ ಇದ್ದರು ಮತ್ತು ಅವರು ಸಹ ತಮ್ಮ ಪತಿಯ ಮಾತಿಗೆ ಧ್ವನಿಗೂಡಿಸಿದರು ಎಂದು ಸಾಯಿಕುಮಾರ್ ಹೇಳಿದರು.

ಅಂತಿಮವಾಗಿ, ಸಾಯಿಕುಮಾರ್ ಅವರು, ವಿ ಲವ್ ಯೂ ಅಪ್ಪು, ವಿ ಮಿಸ್ ಯೂ ಅಂತ ಹೇಳಿ ಮಾತು ಮುಗಿಸಿದರು.

ಇದನ್ನೂ ಓದಿ:   Shilpa Shetty:​ ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ

Click on your DTH Provider to Add TV9 Kannada