ಕಾಬೂಲ್: ಅಫ್ಘಾನಿಸ್ತಾನವು ತಾಲಿಬಾನ್ ವಶಕ್ಕೆ ಬಂದ ನಂತರ ಅಲ್ಲಿನ ವೈದ್ಯಕೀಯ ಸೇವೆಗಳ ವ್ಯವಸ್ಥೆ ಕುಸಿಯುತ್ತಿದೆ. ಅಫ್ಘಾನ್ ನೆಲದಲ್ಲಿ ಸೇವೆ ಸಲ್ಲಿಸಿದ್ದ ದೊಡ್ಡ ಸಂಖ್ಯೆಯ ವಿದೇಶಿ ವೈದ್ಯರು ದೇಶ ಬಿಡಲು ಮುಂದಾಗಿದ್ದಾರೆ. ಮತ್ತೊಂದೆಡೆ ವಿದೇಶಗಳಿಂದ ಹಿಂದಿನಂತೆ ನಿಯಮಿತವಾಗಿ ಔಷಧಿಗಳ ಸರಬರಾಜು ಬರುತ್ತಿಲ್ಲ. ಈ ಎರಡೂ ಸಂಗತಿಗಳು ಅಲ್ಲಿನ ವೈದ್ಯಕೀಯ ವ್ಯವಸ್ಥೆಯ ಕೆಟ್ಟ ಪರಿಣಾಮಗಳನ್ನು ತಾಲಿಬಾನ್ ಆಡಳಿತದ ಮುಂದಿನ ನಿರ್ಧಾರದ ಬಗ್ಗೆ ಕಾದು ನೋಡುವಂತೆ ಮಾಡಿವೆ.
ದೇಶ ಬಿಟ್ಟು ಹೋಗಬೇಡಿ. ನಿಮಗೆ ಎಲ್ಲ ಅಗತ್ಯ ಸೌಕರ್ಯ ಒದಗಿಸುತ್ತೇವೆ. ನಿಮ್ಮ ಸಂಸ್ಥೆಗಳ ವಿದೇಶಿ ಸಿಬ್ಬಂದಿ ಮತ್ತು ಸ್ಥಳೀಯ ಸಿಬ್ಬಂದಿಯ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ತಾಲಿಬಾನ್ ಆಡಳಿತದ ಪ್ರಮುಖರು ಹಲವು ಸೇವಾಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಆದರೆ ಈ ಹಿಂದೆ ತಾಲಿಬಾನ್ ಆಡಳಿತದ ಅವಧಿಯಲ್ಲಿ ಅನುಭವಿಸಿದ್ದ ಯಾತನೆಗಳನ್ನು ನೆನಪಿಸಿಕೊಳ್ಳುತ್ತಿರುವ ಹಲವಾರು ಜನರು ಅಫ್ಘಾನಿಸ್ತಾನದಲ್ಲಿ ಉಳಿಯಲು ಮನಸ್ಸು ಮಾಡುತ್ತಿಲ್ಲ.
ಅಫ್ಘಾನಿಸ್ತಾನದ ಆಸ್ಪತ್ರೆಗಳಿಗೆ ಹಲವು ವರ್ಷಗಳಿಂದ ಔಷಧಿ ಸರಬರಾಜು ಮಾಡುತ್ತಿದ್ದ ಎರಡು ನೆರವು ಸಂಸ್ಥೆಗಳು ತಮ್ಮ ಕಾರ್ಯಾಚರಣೆ ನಿಲ್ಲಿಸಲು ನಿರ್ಧರಿಸಿವೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಶ್ವಬ್ಯಾಂಕ್ ಮತ್ತು ಐರೋಪ್ಯ ಒಕ್ಕೂಟಗಳ ನಿರ್ಧಾರದಿಂದಾಗಿ ವೈದ್ಯಕೀಯ ವ್ಯವಸ್ಥೆಯು ಸಂಕಷ್ಟ ಅನುಭವಿಸುವಂತಾಗಿದೆ.
‘ವೈದ್ಯಕೀಯ ಕೇಂದ್ರಗಳಿಗೆ ಯಾರಿಂದಲೂ ನೆರವು ಸಿಗುತ್ತಿಲ್ಲ. ಅಫ್ಘಾನಿಸ್ತಾನದ ಒಟ್ಟಾರೆ ವೈದ್ಯಕೀಯ ವ್ಯವಸ್ಥೆಯೂ ಈ ಮೊದಲೇ ಸಿಬ್ಬಂದಿ ಕೊರತೆ, ಪರಿಕರಗಳ ಕೊರತೆ, ಅನುದಾನ ಕೊರತೆಯಿಂದ ಹೈರಾಣಾಗಿತ್ತು. ಅನುದಾನಗಳು ಇನ್ನೂ ಕಡಿಮೆಯಾಗುವ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆಯ ಅಫ್ಘಾನಿಸ್ತಾನ ಪ್ರತಿನಿಧಿ ಫಿಲಿಪ್ ರಿಬೆರೊ ಹೇಳಿದ್ದಾರೆ.
ಬೇಡಿಕೆ ಹೆಚ್ಚಳ
ತಾಲಿಬಾನ್ ಸುಪರ್ದಿಗೆ ದೇಶವು ಸಿಲುಕಿದ ನಂತರ ವೈದ್ಯಕೀಯ ಸೇವೆಗಳ ಮೇಲಿನ ಒತ್ತಡ ಹೆಚ್ಚಾಗಿದೆ. ಅಫ್ಘಾನ್ ಬ್ಯಾಂಕ್ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ವಿದೇಶಗಳಿಂದ ಹರಿದು ಬರುತ್ತಿದ್ದ ನೆರವು ಸ್ಥಗಿತಗೊಂಡಿದೆ. ಸಿಬ್ಬಂದಿಗೆ ಸಂಬಳ ಕೊಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂರು ತಿಂಗಳಿಗೆ ಆಗುವಷ್ಟು ದಾಸ್ತಾನು ಇದೆ ಎಂದುಕೊಂಡಿದ್ದೆವು. ಆದರೆ ಅಂದುಕೊಂಡಿದ್ದಕ್ಕಿಂತಲೂ ಬೇಗನೇ ದಾಸ್ತಾನು ಮುಗಿಯುತ್ತಿದೆ. ಇದು ಆತಂಕ ಹುಟ್ಟಿಸಿದೆ. ದೇಶದ ಭೂಗಡಿಗಳನ್ನು ಮುಚ್ಚಿರುವುದರಿಂದ ಮೊದಲಿನಂತೆ ಅಕ್ಕಪಕ್ಕದ ದೇಶಗಳಿಂದಲೂ ಸಹಾಯ ಒದಗುತ್ತಿಲ್ಲ. ಉತ್ತರ ಅಫ್ಘಾನಿಸ್ತಾನದ ಮಝಾರ್-ಎ-ಷರೀಫ್ ಪಟ್ಟಣದ ವಿಮಾನ ನಿಲ್ದಾಣಕ್ಕೆ 12.5 ಟನ್ ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳನ್ನು ಹೊತ್ತ ವಿಮಾನ ಬಂತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
1996ರಿಂದ 2001ರ ಅವಧಿಯಲ್ಲಿ ತಾಲಿಬಾನ್ ಆಡಳಿತವು ವಿದೇಶಿ ನೆರವು ಸಂಸ್ಥೆಗಳೊಂದಿಗೆ ಸಂಘರ್ಷಕ್ಕಿಳಿದಿತ್ತು. ವೈದ್ಯರೂ ಸೇರಿದಂತೆ ಅಫ್ಘಾನ್ ನೆಲದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಸಾಕಷ್ಟು ಜನರನ್ನು ದೇಶದಿಂದ ಹೊರಗೆ ಹಾಕಿತ್ತು. ಆದರೆ ಈ ಬಾರಿ ತಾಲಿಬಾನ್ನ ಧೋರಣೆ ಬದಲಾಗಿದೆ. ವಿದೇಶಿ ಸೇವಾ ಸಂಸ್ಥೆಗಳಿಗೆ ದೇಶದಲ್ಲಿಯೇ ಉಳಿಯುವಂತೆ ಮನವಿ ಮಾಡುತ್ತಿದೆ.
‘ಈ ಮೊದಲು ನಾವು ಹೇಗೆ ಕೆಲಸ ಮಾಡುತ್ತಿದ್ದೇವೆಯೋ ಹಾಗೆಯೇ ಮುಂದಿನ ದಿನಗಳಲ್ಲಿಯೂ ಕೆಲಸ ಮುಂದುವರಿಸುವಂತೆ ತಾಲಿಬಾನ್ ಕೋರುತ್ತಿದೆ. ರಕ್ಷಣೆಯ ಭರವಸೆಯನ್ನೂ ಕೊಟ್ಟಿದ್ದಾರೆ. ಅವರು ಕೊಟ್ಟ ಮಾತು ಉಳಿಸಿಕೊಂಡರೆ ವೈದ್ಯಕೀಯ ಸೇವೆಯೂ ಕಾಲಕ್ರಮೇಣ ಮೊದಲ ಸ್ಥಿತಿಗೆ ಬರಬಹುದು’ ಎಂದು ಡಾಕ್ಟರ್ ವಿಥೌಟ್ ಬಾರ್ಡರ್ಸ್ ಸಂಘಟನೆಯ ಮಘೆಂಡಿ ಹೇಳುತ್ತಾರೆ.
(Afghanistans healthcare system near collapse in Taliban Rule warns aid agencies)
ಇದನ್ನೂ ಓದಿ: ತಾಲಿಬಾನ್ ಜೊತೆಗೆ ಭಾರತದ ಮೊದಲ ರಾಜತಾಂತ್ರಿಕ ಸಭೆ: ಮಹತ್ವದ ಬೆಳವಣಿಗೆ
ಇದನ್ನೂ ಓದಿ: ಹಳ್ಳಿಗಳನ್ನು ನಿರ್ಲಕ್ಷಿಸಿದ್ದು ದೊಡ್ಡ ತಪ್ಪಾಯ್ತು: ತಾಲಿಬಾನ್ಗೆ ಶಕ್ತಿ ತುಂಬಿದ್ದು ಅಫ್ಘಾನ್ ಸರ್ಕಾರದ ತಪ್ಪು ಕೃಷಿ ನೀತಿಗಳು