ಕೊರೊನಾ ವೈರಸ್ ಇಡೀ ಜಗತ್ತಿನಲ್ಲಿ ಉದ್ಯೋಗಕ್ಕೆ ಕುತ್ತು ತಂದಿದೆ. ಎಷ್ಟರ ಮಟ್ಟಿಗೆ ಅಂದ್ರೆ ಪ್ರಪಂಚದ ಅತ್ಯಂತ ಖ್ಯಾತ ವಿಮಾನ ನಿರ್ಮಾಣ ಸಂಸ್ಥೆ ಫ್ರಾನ್ಸ್ನ ಏರ್ಬಸ್ ಸುಮಾರು 15 ಸಾವಿರ ಸಿಬ್ಬಂದಿಯನ್ನ ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಕೊರೊನಾದಿಂದಾಗಿ ವಿಮಾನಯಾನ ಸಂಸ್ಥೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಚೇತರಿಸಿಕೊಳ್ಳುವುದಕ್ಕೆ ಇನ್ನೂ ಮೂರ್ನಾಲ್ಕು ವರ್ಷ ಬೇಕಾಗುತ್ತೆ. ಹೀಗಾಗಿ, ಯುರೋಪ್ನಲ್ಲಿ ಸಿಬ್ಬಂದಿ ಕಡಿತ ಮಾಡ್ತಿರೋದಾಗಿ ಸಂಸ್ಥೆ ಹೇಳಿದೆ.
ಕೊರೊನಾ ‘ಭೂತ’
ಕೊರೊನಾ ವೈರಸ್ನ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣಗೊಂಡಿದೆ. ಸೋಂಕಿತರ ಸಂಖ್ಯೆ 1,05,85,853ಕ್ಕೇರಿಕೆಯಾಗಿದೆ. ಹೊಸದಾಗಿ 1 ಲಕ್ಷ 71 ಸಾವಿರದ 145 ಜನರಿಗೆ ಸೋಂಕು ತಗುಲಿದೆ. ಸೋಂಕಿನಿಂದಾಗಿ, ಕೊರೊನಾಗೆ ಒಟ್ಟು 5 ಲಕ್ಷ 13 ಸಾವಿರ 913 ಜನರು ಬಲಿಯಾಗಿದ್ದಾರೆ. ವಿಶ್ವದಲ್ಲಿ 24 ಗಂಟೆ ಅವಧಿಯಲ್ಲಿ 5,029 ಜನರು ಕ್ರೂರಿ ವೈರಸ್ಗೆ ಬಲಿಯಾಗಿದ್ದಾರೆ. 57 ಲಕ್ಷ 95 ಸಾವಿರದ 101 ಸೋಂಕಿತರು ಗುಣಮುಖರಾಗಿದ್ದು, 57,788 ಜನರ ಸ್ಥಿತಿ ಗಂಭೀರವಾಗಿದೆ.
ಅಮೆರಿಕಕ್ಕೆ ಕಾದಿದೆ ಗಂಡಾಂತರ
ವಿಶ್ವದ ದೊಡ್ಡಣ್ಣ ಅಮೆರಿಕದ ಜಂಘಾಬಲವನ್ನ ಉಡುಗಿಸಿದ್ದು ಕೊರೊನಾ. ದೇಶದಲ್ಲಿ ವೈರಸ್ ತಾಂಡವನೃತ್ಯವಾಡುತ್ತಿದೆ. ಈವರೆಗೂ 27,27,853 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. 1,30,122 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಸೋಂಕಿನ ಸಂಖ್ಯೆ ಇದೇ ರೀತಿ ಮುಂದುವರಿಯುತ್ತಿದ್ದರೆ ಮುಂದೊಂದು ದಿನ, ಒಂದೇ ದಿನ 1 ಲಕ್ಷ ಕೊರೊನಾ ಕೇಸ್ ಬರುವ ಸಾಧ್ಯತೆ ಇದೆ ಅಂತಾ ಸಾಂಕ್ರಾಮಿಕ ರೋಗ ತಜ್ಙ ಡಾ.ಆ್ಯಂಥೋನಿ ಫೌಸಿ ಎಚ್ಚರಿಸಿದ್ದಾರೆ.
ಪೆರು ರೀ ಓಪನಿಂಗ್
ಪೆರು ದೇಶದಲ್ಲಿ ಕೊರೊನಾ ವೈರಸ್ 2,85,213 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 9,677 ಜನರು ವೈರಸ್ನಿಂದ ಬಲಿಯಾಗಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ದೇಶದಲ್ಲಿ ವಿಧಿಸಲಾಗಿದ್ದ ಲಾಕ್ಡೌನ್ ತೆರವುಗೊಳಿಸಲಾಗಿದೆ. ಹೀಗಾಗಿ, ಜನ ಜೀವನ ಎಂದಿನಂತೆ ಶುರುವಾಗಿದೆ. ಮಾರ್ಕೆಟ್ಗಳಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿದ್ರೆ, ದೈಹಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಮಾರ್ಕ್ ಮಾಡಲಾಗಿದೆ.
ಷರತ್ತಿನ ಲಾಕ್ಡೌನ್
ಕೊರೊನಾ ವೈರಸ್ನಿಂದಾಗಿ ಬ್ರೆಜಿಲ್ನಲ್ಲಿ ಸೋಂಕಿನ ಸುನಾಮಿಯೇ ಎದ್ದಿದೆ. ದೇಶದಲ್ಲಿ ಈವರೆಗೂ 14,08,485 ಜನರು ಕೊರೊನಾ ಸೋಂಕಿನಿಂದ ನರಳಾಡುತ್ತಿದ್ದಾರೆ. ವೈರಸ್ನಿಂದಾಗಿ ಈವರೆಗೂ 59,655 ಜನರು ಬಲಿಯಾಗಿದ್ದಾರೆ. ಇಷ್ಟಾದರೂ ಸಹ, ರೀ ಓಪನ್ ಮಾಡಲಾಗಿದೆ. ಆದ್ರೆ, ಸೋಂಕು ಹೆಚ್ಚುತ್ತಲೇ ಇರೋದ್ರಿಂದ ರಿಯೋ ಡಿ ಜನೇರಿಯಾ ಸೇರಿ ಕೆಲ ನಗರಗಳಲ್ಲಿ ಷರತ್ತು ವಿಧಿಸಿ ರೀ ಓಪನ್ಗೆ ಅನುಮತಿ ನೀಡಲಾಗಿದೆ.
ಚೀನಾ ವಿರುದ್ಧ ಟ್ರಂಪ್ ಕಿಡಿ
ಕೊರೊನಾ ವೈರಸ್ನ ಮೂಲ ಚೀನಾ ಅಂತಾ ಚೀನಾ ಅಂತಾ ಅಮೆರಿಕ ಆರೋಪಿಸುತ್ತಲೇ ಇದೆ. ಅಮೆರಿಕದ ಅಧ್ಯಕ್ಷ ಟ್ರಂಪ್, ಚೀನಾ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ವಿಶ್ವದಾದ್ಯಂತ ಕೊರೊನಾ ಹರಡುತ್ತಿರುವ ರೀತಿ ನೋಡಿದ್ರೆ, ಆಘಾತವಾಗುತ್ತೆ. ಕೊರೊನಾದ ಕರಾಳ ಮುಖದ ದರ್ಶನ ಇಡೀ ಜಗತ್ತಿಗೇ ಆಗಿದ್ದು, ಇದನ್ನ ಜನತೆ ಗಮನಿಸುತ್ತಿದ್ದರೆ, ನಾನು ಅನುಭವಿಸಿದ್ದೇನೆ. ಹೀಗಾಗಿ, ಚೀನಾ ಮೇಲೆ ಮತ್ತಷ್ಟು ಕೋಪಗೊಂಡಿದ್ದೇನೆ ಅಂತಾ ಡೊನಾಲ್ಡ್ ಟ್ವೀಟ್ನಲ್ಲಿ ಕಿಡಿಕಾರಿದ್ದಾರೆ.
ಬಡತನ ಹೆಚ್ಚಿಸಿದ ಕೊರೊನಾ
ಹೆಮ್ಮಾರಿ ವೈರಸ್ನಿಂದಾಗಿ ನೇಪಾಳದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ವೈರಸ್ ಬರುವ ಮುನ್ನ ನೇಪಾಳದಿಂದ ಹಲವರು ಭಾರತ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಮಾಡ್ತಿದ್ರು. ಆದ್ರೀಗ, ಕೊರೊನಾ ಭೀತಿಯಿಂದಾಗಿ ಕೆಲಸವಿಲ್ಲದೇ ತವರಿಗೆ ಮರಳಿದ್ದು, ಬಡತನದ ಪ್ರಮಾಣ ಏರಿಕೆಯಾಗಿದೆ. ಉದ್ಯೋಗ ಇಲ್ಲದ ಪರಿಣಾಮ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಹೀಗಾಗಿ, ಹಸಿವಿನಿಂದ ನರಳುವವರ ಸಂಖ್ಯೆ ಹೆಚ್ಚಾಗಿದೆಯಂತೆ.
ಪಾಕ್ನಲ್ಲಿ ಕೊರೊನಾ ಕೇಕೆ
ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿನ್ನೆ ಒಂದೇ ದಿನ 2,846 ಜನರಿಗೆ ಸೋಂಕು ತಗುಲಿದ್ರೆ, 118 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 2,09,337 ಕ್ಕೆ ಏರಿಕೆಯಾಗಿದ್ರೆ, ವೈರಸ್ನಿಂದಾಗಿ 4,304 ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸಿಂಧ್ ಪ್ರಾಂತ್ಯದಲ್ಲೇ ಅತಿ ಹೆಚ್ಚು ಅಂದ್ರೆ, 81,985 ಸೋಂಕಿತರು ಕಾಣಿಸಿಕೊಂಡಿದ್ದು, ಪಂಜಾಬ್ ಪ್ರಾಂತ್ಯದಲ್ಲಿ 75 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ.
Published On - 2:50 pm, Wed, 1 July 20