ಪಾಕಿಸ್ತಾನದಲ್ಲಿ ತಿಂಗಳಿಗೊಂದು ಭಯೋತ್ಪಾದಕರ ಹತ್ಯೆಯಾಗುತ್ತಿದೆ. ಇದೀಗ ಭಾರತಕ್ಕೆ ಶತ್ರುವಾಗಿದ್ದ ಮತ್ತೊಬ್ಬ ಉಗ್ರನ ಹತ್ಯೆಯಾಗಿದೆ. ಈ ವರ್ಷದಲ್ಲಿ ಭಾರತದ ವಿರುದ್ಧ ವಿಷಕಾರುತ್ತಿದ್ದ ಅನೇಕ ಭಯೋತ್ಪಾದಕರನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಈ ಪೈಕಿ ಈಗ ಲಷ್ಕರ್-ಎ-ತೊಯ್ಬಾದ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಘಾಜಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2018 ರಿಂದ 2020 ರವರೆಗೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ, ಇದೀಗ ಅಪರಿಚಿತರು ಗುಂಪೊಂದು ಅಕ್ರಮ್ ಘಾಜಿಯನ್ನು ಗುಂಡುಕ್ಕಿ ಕೊಂದಿದ್ದಾರೆ. ಲಷ್ಕರ್-ಎ-ತೊಯ್ಬಾದಲ್ಲಿ ಅಕ್ರಮ್ ಘಾಜಿ ಉನ್ನತ ಕಮಾಂಡರ್‌ಗಳಲ್ಲಿ ಒಬ್ಬನಾಗಿದ್ದ. ಹಲವು ವರ್ಷಗಳಿಂದ ಉಗ್ರ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಇನ್ನು ಪಾಕಿಸ್ತಾನದಲ್ಲಿ ಅನೇಕ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಹಿಂದೆ ಮುಫ್ತಿ ಕೈಸರ್ ಫಾರೂಕ್, ಖಲಿಸ್ತಾನ್ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಪಂಜ್ವಾಡ್, ಎಜಾಜ್ ಅಹ್ಮದ್ ಅಹಂಗರ್, ಬಶೀರ್ ಅಹ್ಮದ್ ಪೀರ್ ಇನ್ನು ಅನೇಕ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೀಗ ಇಂತಹ ಘಟನೆ ಪಾಕಿಸ್ತಾನ ಉಗ್ರರ ನಿದ್ದೆ ಕೆಡಿಸಿದೆ. ಕಳೆದ ತಿಂಗಳು, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಕೊಲೆ ಮಾಡಲಾಗಿತ್ತು. ಸಿಯಾಲ್‌ಕೋಟ್‌ನಲ್ಲಿ ಲತೀಫ್‌ನನ್ನು ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ. ಲತೀಫ್ 2016ರಲ್ಲಿ ಪಠಾಣ್ ಕೋಟ್ ಏರ್ ಫೋರ್ಸ್ ಸ್ಟೇಷನ್ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ಹೇಳಲಾಗಿದೆ.
2023ರಲ್ಲಿ ಮೇ 6ರಂದು ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾಡ್ನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇಲ್ಲಿಂದ ಶುರುವಾದ ಹತ್ಯೆ ಇದೀಗ ಅಕ್ರಮ್ ಘಾಜಿ ವರೆಗೆ ತಲುಪಿದೆ. ಪರಮ್‌ಜಿತ್ ಸಿಂಗ್ ಪಂಜ್ವಾಡ್ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ, ಪರಮ್‌ಜಿತ್ ಪಾಕಿಸ್ತಾನದ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ನೀಡುತ್ತಿದ್ದರು.
ಇನ್ನು ಈ ಉಗ್ರರರು ಭಾರತದಲ್ಲಿ ವಿಐಪಿಗಳ ಮೇಲೆ ದಾಳಿ ಮಾಡಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಲು ಅನೇಕ ಯುವಕರನ್ನು ಬಳಸುತ್ತಿದ್ದಾರೆ. ಇದರ ಜತೆಗೆ ಪಾಕಿಸ್ತಾನದ ರೆಡಿಯೋಗಳಲ್ಲಿ ಭಾರತ ಸರ್ಕಾರವನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಲು ದೇಶದ್ರೋಹ ಮತ್ತು ಪ್ರತ್ಯೇಕತಾವಾದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಜತೆಗೆ ಮಾದಕವಸ್ತು ಕಳ್ಳಸಾಗಣೆಯಲ್ಲಿಯೂ ಸಕ್ರಿಯರಾಗಿದ್ದ ಪರಮ್‌ಜಿತ್ ಸಿಂಗ್ ಪಂಜ್ವಾಡ್ ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ನಡುವೆ ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
20 ಫೆಬ್ರವರಿ 2023 ರಂದು, ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿವಾಸಿ ಬಶೀರ್ ಅಹ್ಮದ್ ಪಿರ್ ಅಲಿಯಾಸ್ ಇಮ್ತಿಯಾಜ್ ಆಲಂನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಇದನ್ನು ಕೂಡ ಒಂದು ಗುಂಪಿನವರು ನಡೆಸಿರುವುದು ಹಾಗೂ ಹಿಜ್ಬುಲ್ ಮುಜಾಹಿದ್ದೀನ್‌ನ ಲಾಂಚಿಂಗ್ ಕಮಾಂಡರ್ ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಜ್ ಆಲಂ ರಾವಲ್ಪಿಂಡಿಯಲ್ಲಿ ಕೊಲೆ ಮಾಡಲಾಯಿತು.
ಇದನ್ನೂ ಓದು: ಅನಂತ್ನಾಗ್, ಬಾರಾಮುಲ್ಲಾದಲ್ಲಿ ಮುಂದುವರಿದ ಎನ್ಕೌಂಟರ್; ಒಬ್ಬ ಉಗ್ರನ ಹತ್ಯೆ
ಭಯೋತ್ಪಾದನೆಯ ಪುಸ್ತಕ ಎಂದು ಕರೆಯಲ್ಪಡುವ ಎಜಾಜ್ ಅಹ್ಮದ್ ಅಹಂಗರ್ ಅವರನ್ನು ಫೆಬ್ರವರಿ 22 ರಂದು ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಹತ್ಯೆ ಮಾಡಲಾಯಿತು. ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಅನ್ನು ಮರುಪ್ರಾರಂಭಿಸುವಲ್ಲಿ ನಿರತರಾಗಿದ್ದ ಅಲ್ ಖೈದಾದೊಂದಿಗೆ ಇಜಾಜ್ ಸಂಪರ್ಕದಲ್ಲಿದ್ದ. ಫೆಬ್ರವರಿ 26, 2023ರಲ್ಲಿ ಅಲ್ ಬದ್ರ್‌ನ ಮಾಜಿ ಕಮಾಂಡರ್ ಸೈಯದ್ ಖಾಲಿದ್ ರಜಾ ಅವರನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಲ್ ಬದ್ರ್ ಉಗ್ರಗಾಮಿ ಸಂಘಟನೆಯಾಗಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿತ್ತು.
ಮಾರ್ಚ್ 4, 2023ರಲ್ಲಿ ಭಾರತದ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಸೈಯದ್ ನೂರ್ ಶಲೋಬರ್ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶಾಲೋಬರ್ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ಸಹಯೋಗದೊಂದಿಗೆ ಭಯೋತ್ಪಾದನೆ ಬಗ್ಗೆ ಪ್ರಚಾರ ಮಾಡಲಾಗಿತ್ತು. ಇದರ ಜತೆಗೆ ಭಾರತ ಒಳಗೆ ಇರುವ ಭಯೋತ್ಪಾದಕರನ್ನು ಕೂಡ ಹತ್ಯೆ ಮಾಡಲಾಗಿದ್ದು, ಉಗ್ರ ಸಂಘಟನೆಗಳ ಮೇಲೆ ಎನ್ಐಎ ದಾಳಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 am, Fri, 10 November 23