ವಾಷಿಂಗ್ಟನ್: ಅಮೆರಿಕದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಆರ್ಕ್ಟಿಕ್ ಚಳಿಗಾಳಿಗೆ (Arctic Cold Blast) ಜನರು ಅಕ್ಷರಶಃ ನಡುಗಿ ಹೋಗಿದ್ದಾರೆ. ಈ ಭಾಗದ ಬಹುತೇಕ ಕಡೆ ಕನಿಷ್ಠ ಉಷ್ಣಾಂಶವೇ ಮೈನಸ್ ಡಿಗ್ರಿ ಇದೆ. ನ್ಯೂ ಹ್ಯಾಂಪ್ಶೈರ್ನ ಮೌಂಟ್ ವಾಷಿಂಗ್ಟನ್ ಎಂಬಲ್ಲಿ ಶೀತಗಾಳಿಯ ಪರಿಣಾಮವಾಗಿ ಉಷ್ಣಾಂಶ ಬರೋಬ್ಬರಿ ಮೈನಸ್ 79 ಡಿಗ್ರಿಗೆ ಕುಸಿದಿದೆ. ಇಷ್ಟು ಹೀನಾಯ ಚಳಿ ಬಹಳ ಅಪರೂಪಕ್ಕೊಮ್ಮೆ ದಾಖಲಾಗುವಂಥದ್ದು ಎಂದು ವರದಿಗಳು ಹೇಳುತ್ತಿವೆ.
ಆರ್ಕ್ಟಿಕ್ ಬ್ಲಾಸ್ಟ್ ಎಂದು ಹೇಳಲಾಗುವ ಶೀತಗಾಳಿಯು ಮಸಾಚುಸೆಟ್ಸ್, ಕನೆಕ್ಟಿಕಟ್, ರೋಡ್ ಐಲೆಂಡ್, ನ್ಯೂ ಹ್ಯಾಂಪ್ಶೈರ್, ವೆರ್ಮೋಂಟ್ ಮತ್ತು ಮೈನೆ ರಾಜ್ಯಗಳಲ್ಲಿನ 1.6 ಕೋಟಿ ಜನರನ್ನು ಥರಥರ ನಡುಗುಂತೆ ಮಾಡಿದೆ. ನ್ಯೂಯಾರ್ಕ್ ರಾಜ್ಯದಲ್ಲೂ ವಿಪರೀತ ಚಳಿ ಇದೆ. ಒಂದು ರೀತಿಯಲ್ಲಿ ಅಮೆರಿಕದ ಈಶಾನ್ಯ ಪ್ರದೇಶವು ರೆಫ್ರಿಜರೇಟರ್ನ ಫ್ರೀಜರ್ನಲ್ಲಿಟ್ಟಂತಿದೆ. ಅನೇಕ ನಗರಗಳಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಬೋಸ್ಟಾನ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಇದನ್ನೂ ಓದಿ: US vs China: ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕ; ಗರಂ ಆದ ಚೀನಾ
ಆರ್ಕ್ಟಿಕ್ ಬ್ಲಾಸ್ಟ್ ಎಫೆಕ್ಟ್
ಹವಾಮಾನ ವರದಿಗಳ ಪ್ರಕಾರ ಆರ್ಕ್ಟಿಕ್ ಶೀತಗಾಳಿಯು ಕೆನಡಾದ ಪೂರ್ವಭಾಗದಿಂದ ಅಮೆರಿಕ ಪ್ರವೇಶಿಸಿದೆ. ಮಿನೇಸೊಟಾ ರಾಜ್ಯದ ಕಾಬೆಟೊಗಾಮ ಎಂಬ ಪ್ರದೇಶದಲ್ಲಿ ಉಷ್ಣಾಂಶ ಮೈನಸ್ 39.5 ಡಿಗ್ರಿಗೆ ಕುಸಿದಿದೆ. ಇದು ಈ ಸೀಸನ್ನಲ್ಲಿ ಅಮೆರಿಕದಲ್ಲಿ ದಾಖಲಾಗಿರುವ ಅತಿ ಕಡಿಮೆಯ ಉಷ್ಣಾಂಶವಾಗಿದೆ. ಆದರೆ, ಶೀತಗಾಳಿಯ ಪರಿಣಾಮವಾಗಿ ಅಮೆರಿಕದ ಈಶಾನ್ಯ ಭಾಗದ ಬಹುತೇಕ ಎಲ್ಲಾ ಜಾಗಗಳಲ್ಲೂ ಮೈನಸ್ 40 ಡಿಗ್ರಿಗಿಂತ ಕಡಿಮೆ ಉಷ್ಣಾಂಶದಷ್ಟು ಚಳಿ ಆಗುತ್ತಿದೆ. ಮೌಂಟ್ ವಾಷಿಂಗ್ಟನ್ ಸ್ಟೇಟ್ ಪಾರ್ಕ್ ಬಳಿ ಇದು ಮೈನಸ್ 76 ಡಿಗ್ರಿಯವರೆಗೂ ಇಳಿದಿದೆ.
ಏನಿದು ಆರ್ಕ್ಟಿಕ್ ಬ್ಲಾಸ್ಟ್?
ಭೂಮಿಯ ಉತ್ತರ ಗೋಳ (North Pole) ಸುತ್ತಮುತ್ತಲ ಚಳಿಗಾಳಿಯು ಹವಾಮಾನದ ಕೆಳಸ್ತರ ಒತ್ತಡ ಪ್ರದೇಶದಲ್ಲಿ (Low Pressure Area) ಬಂಧಿಯಾಗಿರುತ್ತದೆ. ಭೂಮಿಯಿಂದ ಹಲವು ಕಿಮೀ ಮೇಲಿನಿಂದ ಆವರಿಸುವ ಜೆಟ್ ಸ್ಟ್ರೀಮ್ಗಳು ಈ ಚಳಿಗಾಳಿಯು ಹಿಡಿದಿಡುತ್ತದೆ. ಹೀಗಾಗಿ ಸಾಮಾನ್ಯವಾಗಿ ಈ ಚಳಿಗಾಳಿಯು ನಾರ್ತ್ ಪೋಲ್ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಕೆಲವೊಮ್ಮೆ ಲೋ ಪ್ರೆಷರ್ ಪ್ರದೇಶ ದುರ್ಬಲವಾಗಿಬಿಟ್ಟರೆ ಜೆಟ್ ಸ್ಟ್ರೀಮ್ (Jet Stream) ಅನ್ನು ದಬ್ಬುತ್ತದೆ. ಇದರಿಂದ ಶೀತಗಾಳಿಯು ಬೇರೆ ಪ್ರದೇಶಗಳಿಗೆ ವ್ಯಾಪಿಸುತ್ತದೆ.
ಹೀಗಾದಲ್ಲಿ ಉಷ್ಣಾಂಶವು ಮಾಮೂಲಿಗಿಂತ ತೀರಾ ಕೆಳಗೆ ಕುಸಿಯುತ್ತದೆ. ದಟ್ಟ ಮಂಜಿನ ಹನಿ, ಹಿಮಪಾತಗಳು ಸಂಭವಿಸುತ್ತವೆ. ಈ ಆರ್ಕ್ಟಿಕ್ ಸ್ಫೋಟವನ್ನು ಪೋಲಾರ್ ವೋರ್ಟೆಕ್ಸ್ ವಿದ್ಯಮಾನ ಎಂದೂ ಕರೆಯಲಾಗುತ್ತದೆ.
Published On - 9:12 am, Sun, 5 February 23