ಕರಾಚಿ: ಪಾಕಿಸ್ತಾನ (Pakistan)ದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳಗಳ ಮೇಲೆ ದಾಳಿಗಳು ಮುಂದುವರೆದಿದ್ದು, ಇಲ್ಲಿನ ಒರಂಗಿ ಪ್ರದೇಶದಲ್ಲಿ ಇರುವ ಹಿಂದೂ ದೇವಾಲಯವನ್ನು ಕಿಡಿಗೇಡಿಗಳು ಬುಧವಾರ ಧ್ವಂಸಗೊಳಿಸಿದ್ದಾರೆ. ಕೋರಂಗಿ ಪೊಲೀಸ್ ಠಾಣಾ ವ್ಯಾಪ್ತಿಯ “ಜೆ” ಪ್ರದೇಶದಲ್ಲಿರುವ ಶ್ರೀ ಮಾರಿ ಮಾತಾ ಮಂದಿರದಲ್ಲಿರುವ ದೇವಾಲಯದ ಮೇಲೆ ದಾಳಿ ನಡೆಸಿ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ದೇವಸ್ಥಾನವನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕುರಾನ್ಗೆ ಅವಮಾನ: ಅಫ್ಘಾನ್ ಮಾಡೆಲ್ ಹಖಿಕಿಯನ್ನು ಬಂಧಿಸಿದ ತಾಲಿಬಾನ್
ಘಟನೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ ಕಾನೂನು ಜಾರಿ ಸಂಸ್ಥೆಗಳು ಸ್ಥಳಕ್ಕೆ ಬಂದು ಘಟನೆಯ ಕುರಿತು ಮಾಹಿತಿ ಕಲೆಹಾಕಿದ್ದು, ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊಟ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳು ದೇವಾಲಯದ ಆವರಣಕ್ಕೆ ನುಗ್ಗಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯು ಕರಾಚಿಯಲ್ಲಿ ವಾಸಿಸುವ ಹಿಂದೂ ಸಮುದಾಯದವರಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಕೋರಂಗಿ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: Sri Lanka Crisis: ಭಾರತ ಬಿಟ್ಟು ಬೇರಾವ ದೇಶವೂ ನಮಗೆ ಹಣ ನೀಡುತ್ತಿಲ್ಲ; ಶ್ರೀಲಂಕಾ ಪ್ರಧಾನಿ ಹೇಳಿಕೆ
ಆರರಿಂದ ಎಂಟು ವ್ಯಕ್ತಿಗಳು ದ್ವಿಚಕ್ರವಾಹನದಲ್ಲಿ ಬಂದು ದೇವಾಲಯದ ಮೇಲೆ ದಾಳಿ ಮಾಡಿದ್ದಾರೆ. ಯಾಕೆ ದಾಳಿ ನಡೆಸಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ಪ್ರದೇಶದ ಹಿಂದೂ ನಿವಾಸಿ ಸಂಜೀವ್ ಅವರು ಪತ್ರಿಕೆಗೆ ತಿಳಿಸಿದರು. ದಾಳಿ ಬಗ್ಗೆ ಮಾತನಾಡಿದ ಕೋರಂಗಿ ಎಸ್‌ಎಚ್‌ಒ ಫಾರೂಕ್ ಸಂಜರಾಣಿ, ಐದರಿಂದ ಆರು ಅಪರಿಚಿತ ಶಂಕಿತರು ದೇವಾಲಯಕ್ಕೆ ಪ್ರವೇಶಿಸಿ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ಸೇರಿದ ದೇವಾಲಯಗಳು ಗುಂಪು ಹಿಂಸಾಚಾರಕ್ಕೆ ಗುರಿಯಾಗುತ್ತಿವೆ. ಅಕ್ಟೋಬರ್‌ನಲ್ಲಿ ಕೊಟ್ರಿಯ ಸಿಂಧೂ ನದಿಯ ದಡದಲ್ಲಿರುವ ಐತಿಹಾಸಿಕ ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗಸ್ಟ್‌ನಲ್ಲಿ ಸ್ಥಳೀಯ ಸೆಮಿನರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಎಂಟು ವರ್ಷದ ಹಿಂದೂ ಹುಡುಗನಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದ ನಂತರ ದುಷ್ಕರ್ಮಿಗಳು ಭೋಂಗ್ ಪಟ್ಟಣದಲ್ಲಿರುವ ಶ್ರೀ ಗಣೇಶ ದೇವಾಲಯವನ್ನು ಧ್ವಂಸಗೊಳಿಸಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಇರಾನ್ನಲ್ಲಿ ಭೀಕರ ಅಪಘಾತ; ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ರೈಲು, 22 ಪ್ರಯಾಣಿಕರ ಸಾವು
ಅಧಿಕೃತ ಅಂದಾಜಿನ ಪ್ರಕಾರ ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದಾಗ್ಯೂ ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಾರೆ. ಅವರು ಆಗಾಗ್ಗೆ ಉಗ್ರರ ಕಿರುಕುಳದ ಬಗ್ಗೆ ದೂರು ನೀಡುತ್ತಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ