ತಾವು ಅಧಿಕಾರಕ್ಕೆ ಬಂದರೆ ಕೊರೊನಾ ಚುಚ್ಚುಮದ್ದನ್ನು ಜನರಿಗೆ ಪುಕ್ಕಟೆ ನೀಡುತ್ತೇವೆ ಎಂದು ಬಿಹಾರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ ಡಿ ಎ ಹೇಳಿದ್ದು ಎಲ್ಲರಿಗೂ ಗೊತ್ತು. ಒಂದು ಹೆಜ್ಜೆ ಮುಂದೆ ಹೋಗಿರುವ ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ರಾಜ್ಯದಲ್ಲಿ ಯಾರು ಯಾರಿಗೆ ಕೊರೊನಾ ಚುಚ್ಚುಮದ್ದು ನೀಡಬೇಕು ಮತ್ತು ಅದನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಮಂಗಳವಾರವಷ್ಟೇ ಚರ್ಚೆ ನಡೆಸಿದರು.
ಆದರೆ ಈ ಮಧ್ಯೆ, ಇಂಗ್ಲೆಂಡಿನಿಂದ ಒಂದು ನಿರಾಶಾದಾಯಕ ಸುದ್ದಿ ಬಂದಿದೆ.
ಅದು ಏನು?
ಯು ಕೆ (United Kingdom) ಚುಚ್ಚುಮದ್ದು ಕಾರ್ಯಪಡೆ ಅಲ್ಲಿಯ ಸರಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ ಮೊದಲು ಬರುವ ಕೊರೋನಾ ಚುಚ್ಚುಮದ್ದು ಅಪೂರ್ಣ ವಾಗಿರುವ ಸಾಧ್ಯತೆ ಹೆಚ್ಚು. ಚುಚ್ಚುಮದ್ದನ್ನು ತೆಗೆದುಕೊಂಡ ಎಲ್ಲರ ಮೇಲೂ ಅದು ಪರಿಣಾಮಕಾರಿಯಾಗಿರುತ್ತದೆ ಎಂಬುದರ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದೆ. ಲಾನ್ಸೆಟ್ ವೈದ್ಯಕೀಯ ನಿಯತಕಾಲಿಕದಲ್ಲಿ ಈ ಕುರಿತು ಬರೆದಿರುವ ಯು ಕೆ ಚುಚ್ಚುಮದ್ದು ಕಾರ್ಯಪಡೆಯ ಮುಖ್ಯಸ್ಥರಾದ ಕೇಟ್ ಬಿಂಗ್ ಹ್ಯಾಮ್, ಬರಲಿರುವ ಕೊರೋನಾ ಚುಚ್ಚುಮದ್ದಿನ ಕಾರ್ಯಕ್ಷಮತೆ ಬಗ್ಗೆ ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಾಯಶಃ ಲಸಿಕೆಯು ರೋಗ ಲಕ್ಷಣ ಮಾತ್ರ ಕಡಿಮೆ ಮಾಡಬಹುದು
ಮುಂದೊಂದು ದಿನ ಕೊರೊನಾಕ್ಕೆ ಚುಚ್ಚುಮದ್ದು ಬರುತ್ತೆ ಎಂಬ ಬಗ್ಗೆಯೇ ಅನುಮಾನವಿದೆ. ಈ ಕುರಿತಾದ ಅತೀ ನಿರೀಕ್ಷೆ ಮತ್ತು ನೆಮ್ಮದಿಯ ವಿರುದ್ಧ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಮೊದಲ ತಳಿಯ ಚುಚ್ಚುಮದ್ದು ತುಂಬಾ ಅಪೂರ್ಣವಾಗಿರುತ್ತೆ. ಆ ಚುಚ್ಚುಮದ್ದು ಕೊರೋನಾ ವೈರಸ್ಸನ್ನ ತಡೆಯದೇ ಇರಲೂಬಹುದು. ಪ್ರಾಯಶಃ ರೋಗ ಲಕ್ಷಣಗಳನ್ನು ಮಾತ್ರ ಆ ಚುಚ್ಚುಮದ್ದು ಕಡಿಮೆ ಮಾಡಬಹುದು.
ಆದ್ದರಿಂದ ಬರಲಿರುವ ಚುಚ್ಚುಮದ್ದು ತನ್ನ ಕೆಲಸ ಮಾಡುತ್ತೆ ಎಂಬುದನ್ನು ನಂಬುವುದು ಕಷ್ಟ ಅಥವಾ ಅದು ಸಂಪೂರ್ಣ ವಿಫಲವಾಗಲೂಬಹುದು ಎಂದು ಹೇಳಿದ್ದಾರೆ. ಮುಂದುವರಿದು, ವಿಶ್ವದ ಮತ್ತು ತಮ್ಮ ದೇಶದ ಚುಚ್ಚುಮದ್ದು ತಯಾರಿಕಾ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು, ವಿಶ್ವದಲ್ಲಿನ ಎಲ್ಲರಿಗೂ ಬೇಕಾಗುವಷ್ಟು ಚುಚ್ಚುಮದ್ದು ತಯಾರಿಕಾ ಸಾಮರ್ಥ್ಯ ಇಲ್ಲ. ಇಂಗ್ಲೆಂಡಿನ ಪರಿಸ್ಥಿತಿ ನೋಡಿದರೆ ಸ್ವಲ್ಪ ಜಾಸ್ತಿಯೇ ಗಾಬರಿಯಾಗುತ್ತೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಆಕ್ಸಫರ್ಡ್ ವಿಶ್ವವಿದ್ಯಾಲಯದ ಜೊತೆಗೂಡಿ ಚುಚ್ಚುಮದ್ದು ತಯಾರಿಕಾ ಕೆಲಸಕ್ಕೆ ಕೈ ಹಾಕಿರುವು ಆಸ್ಟ್ರಾಜೆನೆಕಾ ಸಂಸ್ಥೆ ಮಾತ್ರ ತಾನು ನಡೆಸುತ್ತಿರುವ ಪ್ರಯೋಗ ತುಂಬಾ ವಿಶ್ವಾಸ ಮೂಡಿಸಿದೆ. ಹಿರಿಯರು ಮತ್ತು ಕಿರಿಯರು- ಈ ಎರಡು ವರ್ಗದ ಜನರಲ್ಲಿ ತನ್ನ ಚುಚ್ಚುಮದ್ದು ಸಫಲವಾಗಿದೆ ಎಂದು ಹೇಳಿಕೊಂಡಿದೆ.
ಲಂಡನ್ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ ಇನ್ನೂ ಕಳವಳಕಾರಿ ಸಂಗತಿ
ಈ ಮಧ್ಯೆ ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ನಿನ ವಿಜ್ಞಾನಿಗಳು ಹೊಸದೊಂದು ವಿಚಾರವನ್ನು ಬಹಿರಂಗ ಪಡಿಸಿದ್ದು ಅದು ಇನ್ನೂ ಕಳವಳಕಾರಿ ಆಗಿದೆ. ಬಹಳ ಜನ ಬ್ರಿಟೀಶರ ಶರೀರದಲ್ಲಿ ಹುಟ್ಟಿದ ಕೊರೋನಾ ಪ್ರತಿಕಾಯಗಳು ಬಹಳ ಬೇಗ ಕಡಿಮೆ ಆಗುತ್ತಿವೆ. ಇದು ಪ್ರಾಯಶಃ ಕೊರೋನಾದ ಎರಡನೇ ಅಲೆ ಬರಲು ಅನುವು ಮಾಡಿಕೊಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.